ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಾದಿತ ಸ್ಥಳದಿಂದ ಸಮಾಧಿ ಎತ್ತಂಗಡಿ

Vishwanath S
Updated On : 23 Mar 2014, 1:09 am

ಚಿಂತಾಮಣಿ: ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಶುಕ್ರವಾರ ಕೊಲೆಯಾದ ನಂಜರೆಡ್ಡಿ ಅವರ ಶವ ಸಂಸ್ಕಾರವನ್ನು ಜಿಲ್ಲಾಡತದ ಆದೇಶ ದಿಕ್ಕರಿಸಿ ವಿವಾದಿತ ಸರ್ಕಾರಿ ಸ್ಥಳದಲ್ಲಿ ನಡೆಸಿದ್ದು, ಇದನ್ನು ರಾತ್ರೋ ರಾತ್ರಿ ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ರಾತ್ರಿ ಪೊಲೀಸರ ತೀವ್ರ ವಿರೋಧದ ನಡುವೆಯೂ ಮೃತ ನಂಜರೆಡ್ಡಿ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ನೆರವೇರಿಸಿದ್ದರು. ನಂತರ ರಾತ್ರಿ 11 ಗಂಟೆ ವೇಳೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯಾಗೋಪಿನಾಥ್‌ರವರಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವಹಿಸಿ ಸಮಾಧಿ ಸ್ಥಳಾಂತರಿಸಲು ಸೂಚಿಸಿದರು.
ಇದರಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸರು ಸ್ವತಃ ತಾವೇ ಮುಂದೆ ನಿಂತು ಹೂತಿಟ್ಟ ಶವವನ್ನು ಹೊರ ತೆಗೆದು ಸಂಬಂಧಿಕರ ವಶಕ್ಕೆ ನೀಡಿದರು. ಇದರಿಂದ ಸಂಬಂಧಿಕರು ಖಾಸಗೀ ಜಮೀನಿನ ಸ್ಮಶಾನದಲ್ಲಿ ಮತ್ತೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದರು. ಜೊತೆಗೆ ಗ್ರಾಮದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಕಟ್ಟಡಗಳನ್ನು ಪೊಲೀಸ್ ಸರ್ಪಗಾವಲಿನಲ್ಲಿ ಶನಿವಾರ ಬೆಳಗಿನ ಜಾವ 5 ಕ್ಕೂ ಹೆಚ್ಚು ಜೆಸಿಬಿಗಳ ಮೂಲಕ ನೆಲಸಮ ಮಾಡಲಾಯಿತು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರೂ ಜಗ್ಗದ ಅಧಿಕಾರಿಗಳು ಕಟ್ಟಡಗಳನ್ನು ನೆಲಸಮ ಮಾಡಿ ಸರ್ಕಾರಿ ಜಮೀನಿನ ನಕ್ಷೆ ಗುರ್ತಿಸಿ, ಬೇಲಿ ಹಾಕಿ ಹದ್ದುಬಸ್ತು ಮಾಡಿದರು. ದೊಡ್ಡಗಂಜೂರು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಪೊಲೀಸರು ಮುಂಜಾಗ್ರತ ಕ್ರಮವಾಗಿ 5 ದಿನಗಳ ಕಾಲ 144 ಕಾಯ್ದೆಯನ್ವಯ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರು ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement