ಏರಿದ ಚುನಾವಣೆ ಕಾವು, ಹೆಚ್ಚಿದ ನೀರಿನ ಬವಣೆ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಒತ್ತಡದ ಕೆಲಸಗಳ ನಡುವೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮತ್ತು ಜಿಪಂ ಆದ್ಯತೆ ನೀಡದಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿದೆ.
ಕಳೆದ ಎರಡ್ಮೂರು ತಿಂಗಳ ಹಿಂದೆ ಪಂಚಾಯತ್ ರಾಜ್ ಸಚಿವ ಪಾಟೀಲ್, ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮುಂದಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಳವಾಗದಂತೆ ಈಗಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದರು. ಇದಕ್ಕೆ ರಾಜ್ಯ ಸರ್ಕಾರ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದರು. ಆಗ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 40 ಕೋಟಿ ರು.ಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ ಅಧಿಕಾರಿಗಳು, ಜಿಲ್ಲೆಯ ನೀರಿನ ಸಮಸ್ಯೆಯ ವಾಸ್ತವ ಚಿತ್ರಣವನ್ನು ಮುಂದಿಟ್ಟು ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮುಂದಿನ ದಿನಗಳಲ್ಲಿ ಇದರ ಎರಡಷ್ಟು ಹಳ್ಳಿಗಳು ಸಮಸ್ಯೆಗೆ ಗುರಿಯಾಗಲಿವೆ ಎಂಬ ಆತಂಕ ವ್ಯಕ್ತಪಡಿಸಿದ್ದು ಜನರು ದಿನೇ ದಿನೇ ಹೆಚ್ಚುತ್ತಿರುವ ನೀರಿನ ಸಮಸ್ಯೆಗೆ ತತ್ತರಿಸಿ ಹೋಗುತ್ತಿದ್ದಾರೆ.
ತಾಪಕ್ಕೆ ತೀರದ ದಾಹ: ಪ್ರಸ್ತುತ ಬಿಸಿಲಿನ ತಾಪ ಜನರ ದಾಹವನ್ನು ಇನ್ನೂ ಹೆಚ್ಚಿಸಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಖಾಲಿ ಬಿಂದಿಗೆಗಳ ಪ್ರದರ್ಶನ ಕಂಡು ಬರುತ್ತಿದೆ. ನಗರಸಭೆ, ಪುರಸಭೆ, ಪಪಂ ಮತ್ತು ಗ್ರಾಪಂ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿಗಳನ್ನು ಕೊರೆಸುತ್ತಿವೆಯಾದರೂ ನಗರ ಪ್ರದೇಶಗಳಲ್ಲೂ ಕೊಳವೆ ಬಾವಿಗಳು ಕೈ ಕೊಡುತ್ತಿದ್ದು 15 ದಿನಗಳಿಗೊಮ್ಮೆ ಕುಡಿಯುವ ನೀರು, ಆರೇಳು ದಿನಗಳಿಗೆ ಉಪ್ಪು ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಕಡೆ ಉಪ್ಪು ನೀರನ್ನೇ ಸೇವಿಸಲಾಗುತ್ತಿದೆ. ಮತ್ತೊಂದೆಡೆ ವಿದ್ಯುತ್ ಕಾಟದಿಂದ ನೀರಿನ ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಕೊಳವೆ ಬಾವಿಗಳಿಂದ ನೀರನ್ನು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ.ನಗರ ಮತ್ತು ಗ್ರಾಮೀಣ ಭಾಗದ ಹಲವೆಡೆ ನೀರಿಗಾಗಿ ಜಾಗರಣೆ ಇರಬೇಕಾಗಿದ್ದು ವಿವಿಧ ಗ್ರಾಮಗಳಲ್ಲಿ ಜನರು ಮಧ್ಯರಾತ್ರಿಯಾದರೂ ನಲ್ಲಿಗಳ ಮುಂದೆ ಕುಳಿತುಕೊಂಡಿರುತ್ತಾರೆ.
ಚುನಾವಣೆ-ನೀರಿನ ಬವಣೆ: ಲೋಕಸಭಾ ಚುನಾವಣೆಯಲ್ಲಿ ತೊಡಗಿರುವ ಅಧಿಕಾರಿಗಳು ನೀರಿನ ಬವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮೂರಿನ ನೀರಿನ ಸಮಸ್ಯೆ ನೋಡಿ ಎನ್ನುವ ಜನರಿಗೆ ಚುನಾವಣೆ ಬ್ಯುಸಿ ಉತ್ತರವನ್ನು ನೀಡುತ್ತಿದ್ದಾರೆ. ಚುನಾವಣೆಯ ಜಪದಲ್ಲಿ ಜನರ ಸಮಸ್ಯೆ ಕಡೆಗಣಿಸಲಾಗುತ್ತಿದೆ. ಹಲವೆಡೆ ಕೊಳವೆ ಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಒದಗಿಸುವ ಕೆಲಸ ವಾಸ್ತವವಾಗಿ ನಿಂತು ಹೋಗಿದ್ದು ಜಿಲ್ಲೆಯಲ್ಲಿ ಸುಮಾರು 82 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ಪೂರ್ಣವಾಗಿ ಕಾರ್ಯ ರೂಪಕ್ಕೆ ಬಂದಿಲ್ಲ. ಚುನಾವಣಾ ಜ್ವರ ಹೋಗುವುದಕ್ಕೆ ಇನ್ನೂ ಜಾಸ್ತಿ ದಿನಗಳು ಕಳೆಯಬೇಕು.