ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾಡಳಿತದಿಂದಲೇ ಜಾತ್ರೆಗೆ ಚಾಲನೆ

Rashmi Kasaragodu
Updated On : 24 Mar 2014, 12:42 pm

ಕೆಜಿಎಫ್: ರಥೋತ್ಸವಕ್ಕೆ ದಲಿತರಿಗೆ ಅವಕಾಶ ಕಲ್ಪಿಸಿದ್ದು, ಮಾಜಿ ಶಾಸಕರ ಹಗ್ಗಜಗ್ಗಾಟದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತವೇ ಚಾಲನೆ ನೀಡಿದ್ದು ಮಾಜಿ ಶಾಸಕರಿಗೆ ಭಾರಿ ಮುಖಭಂಗವಾಗಿದೆ.
ಕಳೆದ 75 ವರ್ಷಗಳಿಂದ ಮುಜರಾಯಿ ಇಲಾಖೆ ವತಿಯಿಂದ ಅದ್ಧೂರಿಯಾಗಿ ನಡೆಸುತ್ತಿರುವ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದಲ್ಲಿ ದಲಿತರಿಗೆ ಹೊರತು ಪಡಿಸಿ ಜಾತ್ರೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು.
2010ರಲ್ಲಿ ಶಾಸಕರಾಗಿದ್ದ ವೈ. ಸಂಪಂಗಿ ದಲಿತರಿಗೆ ಚಿನ್ನದ ರಥದ ಮೂಲಕ ದೇವರ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಮುಜರಾಯಿ ಇಲಾಖೆಗೆ ಪ್ರಸ್ಥಾವನೆ ಸಲ್ಲಿಸಿದ್ದರು.
 ಅದರಂತೆ 2011ರಲ್ಲಿ ದಲಿತರಿಗೆ ಅಧಿಕೃತವಾಗಿ ದೇವರ ಸೇವೆಗೆ ಆದೇಶ ದೊರೆತ ಹಿನ್ನೆಲೆಯಲ್ಲಿ ರಥೋತ್ಸವದ ಕಡೆ ದಿನ ಮಾಜಿ ಶಾಸಕ ವೈ. ಸಂಪಂಗಿ ಅವರ ನೇತೃತ್ವದಲ್ಲಿ ಚಿನ್ನದ ರಥೋತ್ಸವ ಟ್ರಸ್ಟ್ ವತಿಯಿಂದ ಅದ್ಧ್ದೂರಿ ಹೂವಿನ ಪಲ್ಲಕ್ಕಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಮೆರವಣಿಗೆ ನಡೆಸುತ್ತಿದ್ದರು.
ಆದರೆ ಚಿನ್ನದ ರಥದ ಹೆಸರಿನಲ್ಲಿ ಮಾಜಿ ಶಾಸಕ ವೈ. ಸಂಪಂಗಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಹಾಗೂ ದೇವರ ಹೆಸರಿನಲ್ಲಿ ಲಕ್ಷಾಂತರ ಹಣ ದುರುಪಯೋಗ ಮಾಡಿದ್ದಾರೆ. ಆದ್ದರಿಂದ ಟ್ರಸ್ಟ್‌ಗೆ ಈ ಭಾರಿ ಜಾತ್ರಾ ಮೆರವಣಿಗೆ ನಡೆಸಲು ಮುಜರಾಯಿ ಇಲಾಖೆ ಅವಕಾಶ ನೀಡಬಾರದು ಎಂದು ಮಾಜಿ ಶಾಸಕರಾದ ಎಂ. ಭಕ್ತವತ್ಸಲಂ ಹಾಗೂ ಎಸ್. ರಾಜೇಂದ್ರನ್ ಒತ್ತಾಯಿಸಿ, ತಮ್ಮ ದಲಿತ್ ಗೋಲ್ಡನ್ ಚಾರಿಟಬಲ್ ಟ್ರಸ್ಟ್‌ಗೆ ಉತ್ಸವ ಮೂರ್ತಿಯನ್ನು ನೀಡಿ ದೇವರ ಸೇವೆಗೆ ಅಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಮೊರೆ ಹೋಗಿದ್ದರು.
ಚಿನ್ನದ ರಥ ಹೆಸರಿನಲ್ಲಿ ಈಗಾಗಲೇ ಜಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಎರಡು ಟ್ರಸ್ಟ್‌ಗೆ ಉತ್ಸವ ನಡೆಸಲು ಅನುಮತಿ ನೀಡುವುದಿಲ್ಲ, ಬದಲಾಗಿ ಎರಡೂ ಟ್ರಸ್ಟ್‌ನವರು ಒಗ್ಗೂಡಿ ಜಾತ್ರೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ಎರಡೂ ಟ್ರಸ್ಟ್‌ನವರು ಒಗ್ಗೂಡಿ ಜಾತ್ರೆ ನಡೆಸದ ಕಾರಣ ಮುಜರಾಯಿ ಇಲಾಖೆ ವತಿಯಿಂದ ಕೋಲಾರದ ಎಸಿ ಮಂಜುನಾಥ್, ಎಆರ್‌ಒ ಜಗದೀಶ್ ಹಾಗೂ ವಿಶೇಷ ತಹಸೀಲ್ದಾರ್ ವೆಂಕಟರಾಮಯ್ಯ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಇಬ್ಬರ ನಡುವಿನ ಗೊಂದಲಗಳಿಗೆ ನಾಂದಿ ಹಾಡಿದರು.
ನಗರದ ಹಾಗೂ ಸುತ್ತಮುತ್ತಲಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತ ಸಾಗರ ಚಿನ್ನದ ರಥ ವೀಕ್ಷಣೆಗೆ ಆಗಮಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ತಮಟೆವಾದ್ಯ ಸೇರಿದಂತೆ ಜಾನಪದ ಕಾರ್ಯಕ್ರಮಗಳು ಜನಾಕರ್ಷಕ ರೀತಿಯಲ್ಲಿ ಮೂಡಿಬಂದವು.
ಚಿನ್ನದ ರಥೋತ್ಸವ ಟ್ರಸ್ಟ್ ವತಿಯಿಂದ ಮಾಜಿ ಶಾಸಕ ವೈ. ಸಂಪಂಗಿ ಹಾಗೂ ಬಂಬಲಿಗರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆ, ಮತ್ತೊಂದೆಡೆ ದಲಿತ್ ಗೋಲ್ಡನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್. ರಾಜೇಂದ್ರನ್, ಮಾಜಿ ಶಾಸಕ ಎಂ. ಭಕ್ತವತ್ಸಲಂ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದು ತಿರುಪತಿ ಗೋಪುರ ಮಾಧರಿಯ ಅಲಂಕೃತ ರಥೋತ್ಸವಕ್ಕೆ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಚಾಲನೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ಹಿಲೋರಿ ಹಾಗೂ ಡಿವೈಎಸ್ಪಿ ಎ.ಕೆ. ವಿವೇಕಾನಂದ ನೇತೃತ್ವದಲ್ಲಿ ಸಿಆರ್‌ಪಿ, ಡಿಎಆರ್, ಕಮಾಂಡೆಂಟ್ ಸೇರಿದಂತೆ ಸುಮಾರು 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ವೃತ್ತ ನಿರೀಕ್ಷಕರು, ಪಿಎಸ್‌ಐಗಳು ಬಂದೋಬಸ್ತ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement