ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪಗೆ ಕೃಷ್ಣಯ್ಯಶೆಟ್ಟಿ ಸಾಥ್

Rashmi Kasaragodu
Updated On : 24 Mar 2014, 12:39 pm

ಕೋಲಾರ: ಏಳನೇ ಬಾರಿಗೆ ಲೋಕಸಭೆ ಪ್ರವೇಶಿಸಲು ಚುನಾವಣಾ ಸಮರಕ್ಕೆ ಧುಮುಕಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ಗೆಲುವಿಗೆ ದಾರಿ ಮಾಡಿಕೊಳ್ಳಲು ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಕೆ.ಎಚ್. ಮುನಿಯಪ್ಪ ಮಾಲೂರು ಶಾಸಕ ಕೃಷ್ಣಯ್ಯಶೆಟ್ಟಿ ಪರ ನಡೆಸಿದ ಬ್ಯಾಂಟಿಂಗ್ ಫಲಶೃತಿ ಕಂಡಿದೆ.
ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಸೇರಲು ಕಳೆದ ವರ್ಷವೇ ನಿರ್ಧರಿಸಿದ್ದರಾದರೂ ಕೆಪಿಸಿಸಿ ಅನುಮತಿ ನೀಡಿರಲಿಲ್ಲ. ಇದರಿಂದ ಮುನಿಸಿಕೊಂಡಿರುವ ಕೃಷ್ಣಯ್ಯಶೆಟ್ಟಿ ಇತ್ತೀಚೆಗೆ ಬೆಂಬಲಿಗರ ಸಭೆ ನಡೆಸಿ ತಮ್ಮನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಕೋಲಾರ ಅಭಿವೃದ್ಧಿ ರಂಗದ ಹೆಸರಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಕೆ.ಎಚ್. ಮುನಿಯಪ್ಪ ಪ್ರತಿಕೂಲ ಪರಿಣಾಮದಿಂದ ಪಾರಾಗಲು ದೆಹಲಿಗೆ ತೆರಳಿ ದಿಗ್ವಿಜಯ ಸಿಂಗ್ ಭೇಟಿ ಮಾಡಿ ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೆ ಸೋನಿಯಾಗಾಂಧಿಯವರಿಂದ ಗ್ರೀನ್ ಸಿಗ್ನಲ್ ದೊರೆಯುವಂತೆ ಮಾಡಲು ಒತ್ತಾಯಿಸಿದ್ದರು. ಶನಿವಾರ ರಾತ್ರಿ ದೆಹಲಿಯಲ್ಲಿ ಸೋನಿಯಾಗಾಂಧಿಯರಿಂದ ಕೃಷ್ಣಯ್ಯಶೆಟ್ಟಿ ಸೇರ್ಪಡೆಗೆ ಅನುಮತಿ ಸಿಕ್ಕಿದ ಕೂಡಲೇ ಬೆಂಗಳೂರಿಗೆ ವಾಪಸ್ ಬಂದ ಮುನಿಯಪ್ಪನವರು ಭಾನುವಾರ ಬೆಳಿಗ್ಗೆ ಕೃಷ್ಣಯ್ಯಶೆಟ್ಟಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಬಳಿಕ ಕೋಲಾರಕ್ಕೆ ಬಂದು ಸೋಮವಾರದಿಂದ ಕೈಗೊಳ್ಳಲಿರುವ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಮುಖಂಡರೊಂದಿಗೆ ಚರ್ಚೆ ನಡೆಸಿದರು. ದೂರವಾಣಿ ಮೂಲಕ ಕನ್ನಡಪ್ರಭದೊಂದಿಗೆ ಮಾತನಾಡಿದ ಕೆ.ಎಚ್. ಮುನಿಯಪ್ಪ, ಸೋನಿಯಾಗಾಂಧಿ ಅನುಮತಿ ನೀಡಿದ ಹಿನ್ನಲೆಯಲ್ಲಿ ಕೃಷ್ಣಯ್ಯಶೆಟ್ಟಿ ಕಾಂಗ್ರೆಸ್ ಸೇರಿದ್ದಾರೆ, ಸೋಮವಾರದಿಂದ ತಮ್ಮ ಪರ ಪ್ರಚಾರ ಮಾಡುತ್ತಾರೆ, ಶ್ರೀನಿವಾಸಪುರದಲ್ಲಿ ನಡೆಯುವ ಪಕ್ಷದ ಕಾರ್ಯಕರ್ತರ ಸಭೆಯಲ್ಲೂ ಭಾಗವಹಿಸಲಿದ್ದಾರೆಂದರು. ಕೋಲಾರ ಕ್ಷೇತ್ರ ಶಾಸಕ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಸೇರುವುದಕ್ಕೆ ಪ್ರಯತ್ನ ನಡೆಯುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೊಡ್ಡವರ ಬಳಿ ಏನಾದರೂ ಚರ್ಚೆಗಳು ನಡೆದಿರಬಹುದು, ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಚುನಾವಣೆ ಕಾಲವಾದ್ದರಿಂದ ಪ್ರತಿ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ನಾಜೂಕಾಗಿ ಪರಿಗಣಿಸಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.


ವರ್ತೂರ್ ಪ್ರಕಾಶ್ ಹೇಳಿದ್ದು
ಶಾಸಕರು ಕಾರ್ಯಕರ್ತರ ಸಭೆ ಕರೆದಿರುವುದಾಗಿ ಕೆಲವರು ವದಂತಿ ಹಬ್ಬಿಸಿದ್ದರಿಂದ ಕೆಲವರು ಭಾನುವಾರ ತಮ್ಮ ಮನೆಗೆ ಬಂದು ವಿಚಾರಿಸಿದರು. ನಾನು ಯಾವುದೇ ಸಭೆ ಕರೆದಿರಲಿಲ್ಲ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ. ತಾವಿನ್ನೂ ಯಾವುದೇ ರಾಜಕೀಯ ನಿರ್ಧಾರ ಕೈಗೊಂಡಿಲ್ಲ, ಮಾ.26 ರ ನಂತರ ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಕೇಳಿದ ನಂತರ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಕನ್ನಡಪ್ರಭಕ್ಕೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಯಯ್ಯನವರ ಬಳಿ ತಾನು ಇತ್ತೀಚೆಗೆ ಹೋಗಿದ್ದು ಕ್ಷೇತ್ರದ ಮತ್ತು ಖಾಸಗಿ ಕೆಲಸಕ್ಕಾಗಿಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಚುನಾವಣೆ ಸಂಬಂಧ ಮುಖ್ಯಮಂತ್ರಿಗಳು ಈವರೆಗೆ ನನ್ನೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ಬಿಜೆಪಿಯ ಅಭ್ಯರ್ಥಿ ನಾರಾಯಣಸ್ವಾಮಿ ಎರಡು ಬಾರಿ ತಮ್ಮ ಮನೆಗೆ ಬಂದು ಮಾತನಾಡಿದ್ದು ನಿಜ. ಆದರೆ, ಯಾವುದೇ ಭರವಸೆ ನೀಡಿಲ್ಲ. ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ಪ್ರಶ್ನೆಯೇ ಇಲ್ಲ. ತನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಏನು ಹೇಳುತ್ತಾರೋ ಆ ರೀತಿ ಮಾಡುತ್ತೇನೆಂದರು. ಮಾಲೂರು ಕೃಷ್ಣಯ್ಯಶೆಟ್ಟಿ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಬಿಜೆಪಿಯವರು ಕೈಬಿಟ್ಟರು, ಜೆಡಿಎಸ್ ಮುಖಂಡರು ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಯಾವುದಾದರೊಂದು ರಾಷ್ಟ್ರೀಯ ಪಕ್ಷವಿರಲಿ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿಬಹುದೆಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement