ರಾಜಗೋಪುರ ನಿರ್ಮಾಣಕ್ಕೆ ಸಹಕರಿಸಿ
ವಿ.ಡಿ.ಗಣೇಶ್
ಗೌರಿಬಿದನೂರು: ತಾಲೂಕಿನ ನಗರಗೆರೆ ಹೋಬಳಿಯ ಜೋಡಿ ಗ್ರಾಮಗಳಾದ ಮುದಲೋಡು- ಗೊಲ್ಲಹಳ್ಳಿ ಈ ಹಿಂದೆ ಸಸ್ಯಶ್ಯಾಮಲವಾಗಿದ್ದು, ಈಗ ಮಳೆಬೆಳೆ ಇಲ್ಲದೆ ತೀವ್ರ ಬರಗಾಲ ಎದುರಿಸುತ್ತಿದೆ. ಹಾಗಾಗಿ ದೇವರನ್ನು ಒಲಿಸಲು ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ತೊಡಗಿದ್ದಾರೆ.
ಚಾರಿತ್ರಿಕವಾಗಿ ಈ ಪ್ರದೇಶವನ್ನು ಪಾಳೇಗಾರರು ಆಳುತ್ತಿದ್ದರು ಎಂದು ಹೇಳಲು ಪುರಾವೆಗಳಿವೆ. ಗ್ರಾಮದ ಪೂರ್ವ ದಿಕ್ಕಿನಲ್ಲಿ ಶ್ರೀರಾಮ ನೆಲೆಸಿದ್ದ ಎಂಬ ನಂಬಿಕೆಗೆ ಪುಷ್ಠಿ ನೀಡಲು ಈಗಲೂ ವಾಲಿ, ಸುಗ್ರೀವರ ಪ್ರತಿಮೆಗಳು ಕಲ್ಯಾಣಿ ಸಮೀಪವಿದೆ. ಅನಾದಿ ಕಾಲದಿಂದಲೂ ನೆಲೆಸಿದ್ದ ಅಮ್ಮನವರ ಪ್ರತಿಮೆಯನ್ನು ಪುನರ್ಪ್ರತಿಷ್ಠಾಪಿಸಿ ಸರ್ವೇಶ್ವರಿ ಎಂದು ನಾಮಕರಣ ಮಾಡಲಾಗಿದೆ. ಸಮೀಪವಿರುವ ಬೇವಿನ ಮರದ ಕೆಳಗೆ ನಾಗರಕಲ್ಲುಗಳನ್ನು ಸರಿಪಡಿಸಿದ್ದು ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ಮುದಲೋಡು ಗ್ರಾಮದಲ್ಲಿ ನೆಲೆಸಿರುವ ಆಂಜನೇಯ ಸುಮಾರು 500 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟಿದ್ದು ಎನ್ನಲಾಗುತ್ತಿದ್ದು ಕಾಲಾಂತರದಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹೋಗಿತ್ತು. ಸುಭದ್ರವಾದ ದೇಗುಲವನ್ನು ಪುನನರ್ನಿರ್ಮಾಣ ಮಾಡಲು ಸಮಿತಿಯ ಖಜಾಂಚಿ ಎಂ.ಎನ್.ಸುಬ್ಬಾರಾವ್, ಟ್ರಸ್ಟಿನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಶ್ರಮದಿಂದ ಸಾರ್ವಜನಿಕವಾಗಿ ಸರ್ಕಾರದಿಂದ ವಂತಿಗೆ ಸಂಗ್ರಹಿಸಿ 23 ಲಕ್ಷಗಳಿಂದ ದೇವಾಲಯಕ್ಕೆ ಹೊಸ ರೂಪ ನೀಡಲಾಗಿದೆ.
ವಿಗ್ರಹದ ವಿಶೇಷತೆ: ವಿಗ್ರಹವು ಹಳೆಯದಾಗಿದ್ದು ಸ್ವಾಮಿ ವಿಗ್ರಹದಲ್ಲಿ ಬಾಲದಲ್ಲಿ ಗಂಟೆ, ಶಿರದಲ್ಲಿ ಶಿಖೆ, ಹಸ್ತದಲ್ಲಿ ಸೌಗಂಧಿಕಾ ಪುಷ್ಪ, ಶಂಖ ಚಕ್ರಗಳನ್ನು ಹೊಂದಿರುತ್ತದೆ. ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ 732 ಪ್ರಾಣ ದೇವರುಗಳಲ್ಲಿ ಮುದಲೋಡಿನ ಅಭಯಾಂಜಿನೇಯನೂ ಒಂದಾಗಿದೆ ಎಂಬ ಪ್ರತೀತಿ ಇದೆ.
ದೇವಾಲಯ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದಾಗ ನಾಲ್ಕೂವರೆ ಅಡಿ ಎತ್ತರದ ಶಿವನ ವಿಗ್ರಹ ಲಭ್ಯವಾಗಿದೆ. ಈ ಎರಡು ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ಶಿವನ ವಿಗ್ರಹದೊಂದಿಗೆ ಪ್ರತಿಷ್ಠಾಪಿಸಿದ್ದರಿಂದ ಶ್ರೀ ಶಿವಾಂಜಿನೇಯ ಸ್ವಾಮಿ ದೇವಾಲಯ ಎಂದು ನಾಮಕರಣ ಮಾಡಿ ಇದೇ ಹೆಸರಿನಲ್ಲಿ ಟ್ರಸ್ಟನ್ನು ನೋಂದಣಿ ಮಾಡಲಾಗಿದೆ.
ಈಗ ದೇವಾಲಯಕ್ಕೆ ಕಾಂಪೌಂಡ್ ಗೋಡೆ ಹಾಗೂ ಗರ್ಭಗುಡಿಯ ಮೇಲೆ ರಾಜಗೋಪುರ ಸುಮಾರು 8 ಲಕ್ಷ ಖರ್ಚಿನೊಂದಿಗೆ ನಿರ್ಮಾಣವಾಗಬೇಕಾಗಿದೆ. ಭಕ್ತ ಮಹಾಶಯರು ದೇಣಿಗೆ ರೂಪದಲ್ಲಿ ನೀಡಿದರೆ ಈ ಧಾರ್ಮಿಕ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಟ್ರಸ್ಟ್ ಸದಸ್ಯರು ಮನವಿ ಮಾಡಿದ್ದಾರೆ. ದಿನನಿತ್ಯದ ಪೂಜೆಗಾಗಿ ಶಾಶ್ವತವಾದ ಪೂಜಾನಿಧಿಯನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ವಿಶೇಷ ದಿನಾಂಕಕ್ಕೆ ಎಂದು 1001ನ್ನು ವಂತಿಗೆ ರೂಪದಲ್ಲಿ ನೀಡಿದರೆ ಪ್ರತಿ ವರ್ಷ ಆ ದಿನದಂದು ಶಾಶ್ವತವಾಗಿ ಪೂಜೆ ನಡೆಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.