ಶಾಲೆಯಿಂದ ಹೊರಗುಳಿದವರ ಕರೆತನ್ನಿ
ಶಿಡ್ಲಘಟ್ಟ: ನಾನಾ ಕಾರಣಗಳಿಗಾಗಿ ತಾಲೂಕಿನಲ್ಲಿ 149 ಮಂದಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರೆಲ್ಲರನ್ನೂ ಶಾಲೆಯತ್ತ ಕರೆತರುವ ಕೆಲಸ ಆಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಢಿತಿಳಿಸಿದ್ದಾರೆ.
ತಾಲೂಕಿನ ವೀರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಡತನ, ಅನಕ್ಷರತೆ, ಅಜ್ಞಾನ ಇನ್ನಿತರೆ ಕಾರಣಗಳಿಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ದುಡಿಮೆಗೆ ದೂಡಲಾಗಿದೆ ಎಂದರು.
ಮಕ್ಕಳು ಶಾಲೆಯಿಂದ ಹೊರಗುಳಿದಿರುವುದರಲ್ಲಿ ಪೋಷಕರು, ಶಿಕ್ಷಕರು, ನೆರೆ ಹೊರೆಯವರು ಸಾಮಾಜಿಕ ಜವಾಬ್ದಾರಿ ಹೊತ್ತು ಶಾಲೆಯತ್ತ ಕರೆತರುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಶಿಕ್ಷಕರ ಬೋಧನಾ ಕೌಶಲ್ಯ ಹೆಚ್ಚಿಸುವ ಕೆಲಸವೂ ನಡೆಯುತ್ತಿದೆ ಎಂದರು. ಸಮನ್ವಯಾಕಾರಿ ಸುಮಾ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಪೋಷಕರನ್ನು ಸೇರಿಸಿಕೊಂಡು ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪೋಷಕರನ್ನು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಯತ್ನ ಪ್ರಶಂಸನೀಯ ಎಂದರು.
ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಲ್ಲಿ ಉತ್ತಮ ರಂಗೋಲಿ ಬಿಡಿಸಿದ ಎಂ. ಶಿಲ್ಪ ಹಾಗೂ ಟಿ. ಸುಮಾ ಪ್ರಥಮ ಬಹುಮಾನ ಹಂಚಿಕೊಂಡರೆ, ನಿರ್ಮಲ ಹಾಗೂ ಕಾಮಾಕ್ಷಿ ದ್ವಿತೀಯ ಬಹಮಾನ ಹಂಚಿಕೊಂಡರು. ಜಯಲಕ್ಷ್ಮಿ, ಗಾಯತ್ರಿ, ಪದ್ಮ, ಚೈತ್ರ, ಮಂಜುಳ, ಭಾರತಮ್ಮ, ರಾಮಾಂಜನಮ್ಮ, ಅನಿತ, ಲಕ್ಷ್ಮಮ್ಮ, ಗಾಯಿತ್ರಮ್ಮ, ಪ್ರೇಮಲೀಲ, ಪಾರ್ವತಮ್ಮ, ಭಾಗ್ಯಮ್ಮ, ರಮ್ಯಾ, ವರಲಕ್ಷ್ಮಿ, ಸುಷ್ಮ ಹಾಗೂ ವೇಧಶ್ರೀ ಸಮಾಧಾನಕರ ಬಹುಮಾನ ಪಡೆದರು.