ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ಪ್ರಚಾರ ನಿಷೇಧಕ್ಕೆ ಚಿಂತನೆ
ಕ.ಪ್ರ. ವಾರ್ತೆ ಟಿ ಕೋಲಾರ ಟಿ ಮಾ.24
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ಪರೀಕ್ಷೆ ರಾಜಕೀಯ ಸಮಾರಂಭ, ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಜಿಪಂ ಸಿಇಒ ವಿನೋತ್ ಪ್ರಿಯಾ ಸೂಚಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿಯಾಗಿ ಜಿಲ್ಲೆಯ ಎಲ್ಲಾ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪರೀಕ್ಷೆ ಬರೆಯುವ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಚ್ಚರವಹಿಸಿ. ಚುನಾವಣಾ ಏಕಗವಾಕ್ಷಿ ಸಮಿತಿಯ ಮುಂದೆ ಈ ವಿಷಯ ತರಲಾಗುವುದು ಎಂದರು. ಕೋಲಾರ ಜಿಲ್ಲೆಯ 88 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಲು ಸೂಕ್ತ ವ್ಯವಸ್ಥೆ ಮಾಡುವಂತೆಯೂ ಹಾಗೂ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಸೂಕ್ಷ್ಮವೆಂದು ಗುರುತಿಸಲಾದ ಕೇಂದ್ರಗಳಲ್ಲಿ ವಿಡಿಯೋ ಚಿತ್ರಿಕರಣ ನಡೆಸುವಂತೆ ಸೂಚಿಸಿದರು.
ವಿಡಿಯೋ ಚಿತ್ರಿಕರಣ ಕಡ್ಡಾಯ: ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಿ. ಅಲ್ಲಿ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ನಡೆಸಿ ಪರೀಕ್ಷಾ ಪಾವಿತ್ರ್ಯತೆಗೆ ಯಾವುದೇ ಭಂಗ ಬಾರದಂತೆ ಕ್ರಮ ಕೈಗೊಳ್ಳಿ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಯುವ ಮಾ.28 ರಿಂದ ಏ.9 ರವರೆಗೂ ಒಬ್ಬೊಬ್ಬ ಶುಷ್ರೂಕಿಯನ್ನು ನೇಮಿಸಿ ಪ್ರಥಮ ಚಿಕಿತ್ಸಾ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಪರೀಕ್ಷಾ ಸಂದರ್ಭದಲ್ಲಿ ಸೂಕ್ತ ಭದ್ರತೆಗಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಸಿಬ್ಬಂದಿ ಬಳಸಿಕೊಳ್ಳುವಂತೆ ಸೂಚಿಸಿದರು. ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್, ಡಯಟ್ ಪ್ರಾಂಶುಪಾಲ ಆಂಜಿನಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.