ಕಿಕ್ಬ್ಯಾಕ್ ಪಡೆದ ನಾರಾಯಣಸ್ವಾಮಿ
ಮಾಲೂರು: ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಆಪರೇಷನ್ ಕಮಲದ ವೇಳೆ 19.80 ಕೋಟಿ ಕಿಕ್ಬ್ಯಾಕ್ ಪಡೆದಿದ್ದು, ಇದು ಸುಳ್ಳಾಗಿದ್ದಾರೆ ತಿರುಪತಿ ತಿಮ್ಮಪ್ಪ ಎದುರು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಆರೋಪ ಮಾಡಿದರು.
ಸೋಮವಾರ ಪಟ್ಟಣದಲ್ಲಿ ನಡೆದ ತಮ್ಮ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ತತ್ವ ಸಿದ್ಧಾಂತಗಳ ಪಕ್ಷ ಬಿಜೆಪಿ ಎನ್ನುತ್ತಾರೆ. ಆದರೆ ಭ್ರಷ್ಟಾಚಾರ-ಮಹಿಳಾ ದೌರ್ಜನ್ಯಗಳೆ ಇಂದಿನ ಬಿಜೆಪಿಯ ಸಿದ್ಧಾಂತವಾಗಿದೆ. ವಿಧಾನ ಸೌಧದಲ್ಲಿ ನೀಲಿಚಿತ್ರ ನೋಡುವ ಶಾಸಕರಿದ್ದಾರೆ.ಗುಂಪುಗಾರಿಕೆಯಲ್ಲಿ ನಿರತವಾಗಿರುವ ಬಿಜೆಪಿ ಮುಂದಿನ 25 ವರ್ಷ ರಾಜ್ಯದಲ್ಲಿ ಅಧಿಕಾರಿಕ್ಕೆ ಬರಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರವರ ಕಂಪನಿಯಲ್ಲಿ ಕೋಟ್ಯಂತರ ರು.ಗಳ ಷೇರು ಪಡೆದಿರುವ ನನ್ನನ್ನು ಅದು ಲಂಚ ಎಂದು ಪರಿಗಣಿಸಿ, ವಿಚಾರಣೆ ನಡೆಸದೆ ಜಾಮೀನು ನೀಡದೆ ಜೈಲಿಗೆ ಕಳುಹಿಸಲಾಯಿತು. ನನ್ನದು ತಪ್ಪಿಲ್ಲ ಎಂದು ಗೊತ್ತಿದ್ದರೂ ಬಿಜೆಪಿಯವರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಟಿಕೆಟ್ ನಿರಾಕರಿಸಿ ಪಕ್ಷ ಬಿಡುವಂತೆ ಮಾಡಿದರು. ಆದರೆ ಲಂಚ ಪಡೆದು ಭ್ರಷ್ಟಾಚಾರ ನಡೆಸಿದವರನ್ನು ಕೆಂಪು ಹಾಸು ಹಾಕಿ ಮತ್ತೆ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.