ಚಿಂತಾಮಣಿಯಲ್ಲಿ ಕುಡಿವ ನೀರಿಗೆ ಚಿಂತೆ
ಚಿಂತಾಮಣಿ: ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಜನಸಾಮಾನ್ಯರು ನೀರಿಗಾಗಿ ತತ್ತರಿಸಿ ಹೋಗಿದ್ದಾರೆ.
ಬಿಸಿಲಿನ ಧಗೆಯಿಂದ ಅಂತರ್ಜಲಮಟ್ಟ ಸಂಪೂರ್ಣವಾಗಿ ಕುಸಿದಿದೆ. ಕೊಳವೆ ಬಾವಿಗಳು ಬತ್ತಿಹೋಗಿವೆ. ಕುಡಿಯುವ ನೀರು ಸಿಗದೆ ಜನರು ಪರಿತಪಿಸುತ್ತಿದ್ದಾರೆ. ದನಕರುಗಳು ತಿನ್ನಲು ಮೇವು ಸಿಗದೆ ಕುಡಿಯಲು ನೀರಿಲ್ಲದೆ ಸಾಯುವ ಹಂತ ತಲುಪಿವೆ.
ನೀರು ಕೊಳ್ಳುವ ಪರಿಸ್ಥಿತಿ: ನಗರ ಪ್ರದೇಶದಲ್ಲಿ ಮನೆ, ಹೊಟೇಲ್, ಬೇಕರಿ, ಕಲ್ಯಾಣ ಪಂಟಪಗಳಿಗೆ ನೀರಿನ ಎತ್ತಿನಗಾಡಿಗೆ 70 ರಿಂದ 100 ಹಣ ನೀಡಿ ನೀರು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಬರದಿಂದ ತತ್ತರಿಸಿರುವ ತಾಲೂಕಿನ ಬಗ್ಗೆ ಕಿಂಚಿತ್ತೂ ಗಮನ ನೀಡಿಲ್ಲ. ಇವರ ಮೌನದ ವಿರುದ್ಧ ರೈತರು, ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.
ಮುಂದೆ ಬಾರದ ಜನಪ್ರತಿನಿಧಿಗಳು: ಸ್ವಪ್ರತಿಷ್ಠೆಗಾಗಿ ಇಲ್ಲಿನ ರಾಜಕಾರಣಿಗಳು ಕುಡಿಯುವ ನೀರಿನ ಬಗ್ಗೆ ಚಕಾರ ಎತ್ತುತ್ತಿಲ್ಲ. ಒಬ್ಬರ ಮೇಲೊಬ್ಬರು ಬೆರಳು ತೋರಿಸಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಜನರು ನೀರಿಗಾಗಿ ಪರಿತಪಿಸುತ್ತಿರುವ ಸಂದರ್ಭದಲ್ಲಿ ನಾಯಕರೇಕೆ ಬೀದಿಗಿಳಿದು ಪ್ರತಿಭಟನೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರ ಪ್ರಶ್ನೆ ಮಾಡುತ್ತಿದ್ದಾರೆ.