ಚುನಾವಣೆ ಬಹಿಷ್ಕರಿಸಿದತಲದುಮ್ಮನ ಹಳ್ಳಿ ಜನರ ಮನವೊಲಿಸಲು ಸಭೆ
ಶಿಡ್ಲಘಟ್ಟ: ಚುನಾವಣೆ ಬಹಿಷ್ಕರಿಸಿರುವ ತಲದುಮ್ಮನ ಹಳ್ಳಿಯ ಯುವಕರ ಮನವೊಲಿಸಲು ಸೋಮವಾರ ಸಭೆ ಕರೆಯಲಾಗಿತ್ತು.
ತಲದುಮ್ಮನ ಹಳ್ಳಿಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ತಲದುಮ್ಮನ ಹಳ್ಳಿ ನವೀನ್, ಶಾಶ್ವತ ನೀರಾವರಿ ಯೋಜನೆ ಎಲ್ಲ ಕಾಲಕ್ಕೂ ಚುನಾವಣಾ ತಂತ್ರವಾಗಿ ಮಾತ್ರ ಬಳಕೆಯಾಗುತ್ತಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ. ಬಯಲು ಸೀಮೆಯ ಪ್ರದೇಶದಲ್ಲಿ ಕೃಷಿ ಮಾಡಲು ಕೊಳವೆಬಾವಿ ಕೊರೆಸಿದರು ನೀರು ಸಿಗುತ್ತಿಲ್ಲ. ಸಿಕ್ಕ ನೀರು ಕೂಡಾ ಫ್ಲೋರೈಡ್‌ನಿಂದ ಕೂಡಿರುತ್ತದೆ. ಹಾಗಾಗಿ, ಶಾಶ್ವತ ನೀರಾವರಿ ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ತಲದುಮ್ಮನ ಹಳ್ಳಿ ಗ್ರಾಮದ ಯುವಕರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ತಾಲೂಕು ದಂಡಾದಿಕಾರಿ ನಾರಾಯಣಸ್ವಾಮಿ ಮಾತನಾಡಿ, 'ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಬಹಿಷ್ಕಾರ ಎಂಬ ಪದವನ್ನು ಬಳಸುವಂತಿಲ್ಲ. ಬದಲಾಗಿ ಪ್ರತಿಭಟನೆ ಮಾಡಿ, ಮೊದಲ ಬಾರಿಗೆ ಚುನಾವಣೆಗೆ ಬಳಸುವ ಆಧುನಿಕ ಎಲೆಕ್ಟ್ರಾನಿಕ್ ಯಂತ್ರದ ಕೊನೆಯಲ್ಲಿ 'ನೋಟಾ' ಎಂಬ ಗುಂಡಿಯನ್ನು ಆಳವಡಿಸಿದ್ದು ಚುನಾವಣೆ ಬಹಿಷ್ಕರಿಸುವವರು ಅದನ್ನು ಒತ್ತಿ. ಸರ್ಕಾರ ನೋಟಾ ಮತಗಳನ್ನು ಎಣಿಕೆ ಮಾಡಿ, ಆಯಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ' ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ನಾಯಕರಾದ ಭಕ್ತರ ಹಳ್ಳಿ ಭೈರೇಗೌಡ ಮಾತನಾಡಿ, 'ಚುನಾವಣಾ ಬಹಿಷ್ಕಾರ ತಲದುಮ್ಮನ ಹಳ್ಳಿ ಗ್ರಾಮಸ್ಥರ ಸ್ವಂತ ತೀರ್ಮಾನವಾಗಿದೆ. ಮತದಾನ ಮಾಡುವವರಿಗೆ ಮತದಾನ ಮಾಡಬೇಡಿ ಎಂದು ಹೇಳುವುದಿಲ್ಲ. ಆದರೆ, ಶಾಶ್ವತ ನೀರಾವರಿಗಾಗಿ ಗ್ರಾಮಸ್ಥರು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ. ಜೈಲಿಗೆ ಹೋಗಲು ಸಿದ್ಧ' ಎಂದು ಹೇಳಿದರು. ತಹಸೀಲ್ದಾರ್, ನಾರಾಯಣಸ್ವಾಮಿ, ಗ್ರಾಮಾಂತರ ಠಾಣೆ ಪಿಎಸ್‌ಐ ಹನುಮಂತಪ್ಪ, ಚುನಾವಣಾ ಸಹಾಯ ಅಧಿಕಾರಿ ಯೋಗೇಶ್, ಜಿಪಂ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಹಾಗೂ ತಲದುಮ್ಮನ ಹಳ್ಳಿಯ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೂಂಡಿದ್ದರು.