ಪೇದೆಗಳು ಸಸ್ಪೆಂಡ್
ಕೆಜಿಎಫ್: ಕರ್ತವ್ಯ ಲೋಪ ಎಸಗಿದ ಮೂವರು ಪೊಲೀಸ್ ಪೇದೆಗಳನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಅವರು ಆದೇಶ ಹೋರಡಿಸಿದ್ದಾರೆ.
ರಾಬರ್ಟ್ಸನ್ಪೇಟೆ ಠಾಣೆ ಸರಹದ್ದು ಪ್ರಿಚರ್ಡ್ ರಸ್ತೆಯ ಪದಂ ಪ್ಲಾಜಾ ವಸತಿ ಗೃಹದಲ್ಲಿ ಮಾ.13 ರಂದು ಮಧ್ಯರಾತ್ರಿ ಬೆಂಗಳೂರು ವರ್ತೂರು ಹೋಬಳಿ ಬಳ್ಳಗೆರೆ ಗ್ರಾಮದ ನಿವಾಸಿ ಕೆ. ಮಂಜುನಾಥ್ ಎಂಬುವರಿಗೆ ಹರೀಶ್, ರಾಮು, ರವಿ ಮತ್ತಿಬ್ಬರು ಸೇರಿ ರೈಸ್ ಪುಲ್ಲಿಂಗ್ ವ್ಯಾಪಾರ ಕುದಿರಿಸಿ ಬೆಲೆ ಬಾಳುವ ತಾಮ್ರದ ಚೆಂಬು ಕೊಡಿಸುವುದಾಗಿ, 10 ಲಕ್ಷ ನೀಡುವಂತೆ ವ್ಯವರಿಸುತ್ತಿದ್ದಾಗ ರಾಬರ್ಟ್ಸನ್ಪೇಟೆ ಠಾಣೆಯ ಪೊಲೀಸ್ ಪೇದೆಗಳಾದ ಕೃಷ್ಣ, ವೇಣುಗೋಪಾಲ್ ಹಾಗೂ ಬಂಗಾರಪೇಟೆ ಠಾಣೆಯ ರಾಜ್ಯ ಗುಪ್ತ ವಾರ್ತೆ ವಿ. ರಾಮಕೃಷ್ಣ ಎಂಬುವರು ಸೇರಿ ಕೆ. ಮಂಜುನಾಥ್ರನ್ನು ದಬಾಯಿಸಿ 10.12 ಲಕ್ಷ ನಗದು, ತಾಮ್ರದ ಚೆಂಬು ಹಾಗೂ ಮೊಬೈಲ್ ಕಸಿದುಕೊಂಡಿದ್ದರು.
ಕೆ. ಮಂಜುನಾಥ್ ಅವರಿಗೆ ಈ ವಿಚಾರ ಯಾರಿಗಾದರೂ ತಿಳಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿ ಕೋಲಾರದ ಕಡೆ ಬಲವಂತವಾಗಿ ಕಳುಹಿಸಿಕೊಟ್ಟು ವಂಚನೆ ಮಾಡಿದ್ದಾರೆ ಎಂದು ಕೆ. ಮಂಜುನಾಥ್ ಮಾ.16 ರಂದು ರಾಬರ್ಟ್ಸನ್ಪೇಟೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪಿಎಸ್ಐ ರಂಗಶಾಮಯ್ಯ ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿತ ಪೇದೆಗಳಾದ ಕೃಷ್ಣ, ವಿ. ರಾಮಕೃಷ್ಣ ಹಾಗೂ ವೇಣುಗೋಪಾಲ ಪ್ರಕರಣ ದಾಖಲಾದ ಮಾ.16 ರಿಂದ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ಪಿಎಸ್ಐ ವಿಶೇಷ ವರದಿ ಸಲ್ಲಿಸಿದ್ದರು.
ಈ ಸಂಬಂಧ ಎಡಿಜಿಪಿ ರಾಜ್ಯ ಗುಪ್ತ ವಾರ್ತೆ ಬೆಂಗಳೂರು ಅವರು ಶಿಸ್ತಿನ ಕ್ರಮಕ್ಕಾಗಿ ಸೂಚಿಸಿದ್ದರು. ಅಧಿಕಾರ ದುರುಪಯೋಗ ಮಾಡಿಕೊಂಡು, ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನಲೆಯಲ್ಲಿ ಈ ಮೂವರು ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ಹಿಲೋರಿ ಅವರು ಆದೇಶ ಹೊರಡಿಸಿದ್ದಾರೆ.