ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ಠಾಣೆಯಲ್ಲಿ ಏನೂ ಇಲ್ವೇ?

Rashmi Kasaragodu
Updated On : 25 Mar 2014, 1:35 am

30 ವರ್ಷಗಳಿಂದ ಸಮಸ್ಯೆಗಳಲ್ಲೇ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು



ಟಿ ಕೆ. ರಮೇಶ್
ಬಂಗಾರಪೇಟೆ: ಮಳೆ ಬಂದರೆ ಸೋರುತ್ತದೆ, ಆರೋಪಿಗಳನ್ನು ಕರೆ ತಂದರೆ ಕೂರಿಸಲು ಕೊಠಡಿಗಳಿಲ್ಲ, ಶೌಚಾಲಯವಿಲ್ಲ, ಆರೋಪಿಗಳ ವಿಚಾರಣೆ ಮಾಡಲು ಪ್ರತ್ಯೇಕ ಕೊಠಡಿಗಳಿಲ್ಲ...!
ಹೀಗೆ ಇಲ್ಲಗಳ ನಡುವೆ ಪರದಾಡುತ್ತಿರುವುದು ಪಟ್ಟಣದ ರೇಲ್ವೆ ಪೊಲೀಸರು. ರೇಲ್ವೆ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಕಾನೂನು ಸುವ್ಯವಸ್ಥೆಗೆ ಮೀಸಲಿರುವ ಇಲ್ಲಿನ ಪೊಲೀಸರಿಗೆ ಮೂಲ ಸೌಲಭ್ಯಗಳನ್ನು ಇಲಾಖೆ ಕಲ್ಪಿಸಿಲ್ಲ. ಶೌಚಾಲಯ, ಸ್ನಾನದ ಕೊಠಡಿಗಳು ಇಲ್ಲದೆ ಕಳೆದ 30 ವರ್ಷಗಳಿಂದ ಸಮಸ್ಯೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಪೊಲೀಸರಂತೂ ಬೆಳಗಿನ ನಿತ್ಯಕರ್ಮಗಳಿಗೆ ಮುಜುಗರಕ್ಕೆ ಈಡಾಗಿರುವುದರಿಂದ ಇಲ್ಲಿ ಕರ್ತವ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಸುಮಾರು 35 ಪೊಲೀಸರು ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಠಾಣೆ ವಿಸ್ತೀರ್ಣ ತೀರ ಕಡಿಮೆ. ಅಲ್ಲದೆ ಕೋಲಾರ ಮತ್ತು ಕೆಜಿಎಫ್ ಉಪ ಠಾಣೆಯ ಸುಮಾರು 20 ಮಂದಿ ಪೊಲೀಸರು ವಾರಕ್ಕೆ ಎರಡು ಬಾರಿ ಇಲ್ಲಿಗೆ ಬಂದು ಹೋಗಬೇಕಿದೆ ಎನ್ನುತ್ತಾರೆ ಸಬ್ ಇನ್ಸ್‌ಪೆಕ್ಟರ್ ಎಸ್. ಕೃಷ್ಣಮೂರ್ತಿ. ಪ್ರಸ್ತುತ ಸಬ್ ಇನ್ಸ್‌ಪೆಕ್ಟರ್ ಕೊಠಡಿಯನ್ನೇ ಭಾಗ ಮಾಡಿ ಅದರಲ್ಲಿ ಕಂಪ್ಯೂಟರ್, ಪ್ರಿಂಟರ್ ಇಡಲು ವ್ಯವಸ್ಥೆ ಮಾಡಲಾಗಿದೆ. ದಾಸ್ತಾನು ಕೊಠಡಿ ಇಲ್ಲದೆ ಪುರುಷರ ಬಂಧಿಖಾನೆಯಲ್ಲಿಯೇ ವಿವಿಧ ವಸ್ತುಗಳನ್ನು ಶೇಖರಿಸಿರುವುದರಿಂದ ಆರೋಪಿಗಳನ್ನು ಇರಿಸಲು ಸ್ಥಳಾವಕಾಶ ಕೊರತೆ ಎದ್ದು ಕಾಣುತ್ತಿದೆ. ಹೊರ ಠಾಣೆಯಾಗಿದ್ದ ಈ ಠಾಣೆಯನ್ನು 30 ವರ್ಷಗಳ ಹಿಂದೆ ಮೇಲ್ದೆರ್ಜೆಗೆರಿಸಿದರೂ ಅಗತ್ಯ ಅನುಕೂಲಗಳನ್ನು ಕಲ್ಪಿಸದೆ ಕಡೆಗಣಿಸಿರುವುದರಿಂದ ನಿತ್ಯ ಸಮಸ್ಯೆಗಳಲ್ಲೇ ಕಾಲ ನೂಕುವಂತಾಗಿದೆ. ಪೊಲೀಸ್ ಠಾಣೆ ಪ್ರಾರಂಭಿಸಿ ಹಲವು ದಶಕಗಳು ಕಳೆದಿದರೂ ಮಹಿಳೆಯರಿಗಾಗಿ ಪ್ರತ್ಯೇಕ ಬಂಧೀಖಾನೆ ಇಲ್ಲದಿರುವುದು ಗಮನಾರ್ಹ. ಕೇವಲ ಎರಡು ಕೊಠಡಿಗಳಲ್ಲಿ ನಿತ್ಯ ಕೆಲಸ ನಿರ್ವಹಿಸುವುದು ಸಿಬ್ಬಂದಿಗೆ ಅನಿವಾರ್ಯ. ಸಿಬ್ಬಂದಿ ಕೊರತೆ ಕಾರಣ ಇಲ್ಲಿನ ಠಾಣೆಯಲ್ಲಿ 12 ಗಂಟೆ ಕೆಲಸ ಮಾಡುವ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ. ಆದರೂ ವಿಶ್ರಾಂತಿ ಕೊಠಡಿ ಇಲ್ಲ. ಕೇಂದ್ರ ಸರ್ಕಾರದ ಏಕಸ್ವಾಮ್ಯತೆಗೆ ಒಳಪಟ್ಟ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರೂ ಕೇಂದ್ರ ಸರ್ಕಾರದ ಕಾರ್ಮಿಕರಿಗೆ ಸಿಗುವ ಸಂಬಳ, ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂಬ ಕೊರಗು ಅವರದು. ರೇಲ್ವೆ ಇಲಾಖೆ ಇಬ್ಭಗೆಯ ಧೋರಣೆ ಬೇಸರ ತಂದಿದೆ.
ಠಾಣೆಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಕೋರಿ ವಿಭಾಗೀಯ ರೇಲ್ವೆ ವ್ಯವಸ್ಥಾಪಕರಿಗೆ, ಸಂಬಂಧಿಸಿದ ಇತರ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಠಾಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಠಾಣೆಯ ಪರಿಸ್ಥಿತಿ ಪರಿಶೀಲಿಸಿದ ಕೇಂದ್ರ ರೇಲ್ವೆ ಪ್ರಯಾಣಿಕರ ಮೂಲ ಸೌಲಭ್ಯ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೌಲಭ್ಯ ಕಲ್ಪಿಸುವಂತೆ ರೇಲ್ವೆ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಪೊಲೀಸರ ಅಳಲು. ಇನ್ನಾದರೂ ಮೇಲಾಧಿಕಾರಿಗಳು ಇತ್ತ ನಿಗಾವಹಿಸಿ ಅನುಕೂಲಗಳನ್ನು ಕಲ್ಪಿಸಲು ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement