ಸ್ಪರ್ಧೆಗೆ ಮುಂದೆ, ನಾಮಪತ್ರ ಭರ್ತಿಯಲ್ಲಿ ಹಿಂದೆ!
ಕೋಲಾರ: ನಾಮಪತ್ರ ಸಲ್ಲಿಸಲು ಅತ್ಯುತ್ಸಾಹದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಕೆಲ ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿಯಿಂದ ನೀತಿಪಾಠ ಹೇಳಿಸಿಕೊಂಡ ಪ್ರಸಂಗ ನಡೆಯಿತು. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ ಹಲವರು ನಾಮಪತ್ರ ಹಿಡಿದು ಜಿಲ್ಲಾ ಚುನಾವಣಾಧಿಕಾರಿಗಳ ಬಳಿಗೆ ತಮ್ಮ ಬೆಂಬಲಿಗರೊಂದಿಗೆ ಬಂದಿದ್ದರು. ಕೆಲವರು ಕ್ರಮಬದ್ಧವಾಗಿ ನಾಮಪತ್ರ ಸಿದ್ಧಮಾಡಿಕೊಳ್ಳದೆ ಬಂದಿದ್ದರು. ಇದನ್ನು ಗಮನಿಸಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು, 'ಚುನಾವಣೆಗೆ ಸ್ಪರ್ಧಿಸಲು ಆಸಕ್ತಿಯೊಂದಿದ್ದರೆ ಸಾಲದು. ನಾಮಪತ್ರವನ್ನು ಹೇಗೆ ಭರ್ತಿ ಮಾಡಬೇಕು, ಯಾವ ಯಾವ ದಾಖಲೆ, ವಿವರಗಳನ್ನು ನೀಡಬೇಕೆಂಬುದನ್ನು ತಿಳಿದುಕೊಳ್ಳದಿದ್ದರೆ ಹೇಗೆ?' ಎಂದು ನಯವಾಗಿಯೇ ನಾಮಪತ್ರ ಹಿಂದಕ್ಕೆ ನೀಡಿ, ಲೋಪಗಳನ್ನು ಸರಿಪಡಿಸಿಕೊಂಡು ಬನ್ನಿ ಎಂದು ಸಲಹೆ ನೀಡಿದರು. ಕರುನಾಡು ಪಾರ್ಟಿಯಿಂದ ಟಿ.ಎಂ.ನಾರಾಯಣಸ್ವಾಮಿ, ಪಕ್ಷೇತರರಾಗಿ ಈಂಡಿಗಾನಹಳ್ಳಿಯ ಎಚ್.ವಿ.ಆಂಜಿನಪ್ಪ, ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ನರೇಂದ್ರಬಾಬು ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸದೆ ವಾಪಸ್ ಕಳುಹಿಸಿದರು.
ಬಿಜೆಪಿಯಿಂದ ಪ್ರಮೋದ ಮುತಾಲಿಕ್ ಹೊರಕ್ಕೆ: ಖಂಡನೆ
ಬಂಗಾರಪೇಟೆ: ಪ್ರಮೋದ್ ಮುತಾಲಿಕ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಮತ್ತೆ ಹೊರಗೆ ಹಾಕಿರುವುದನ್ನು ಬಜರಂಗದಳದ ತಾಲೂಕು ಸಂಚಾಲಕ ಹಾಗೂ ಪುರಸಭೆ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ ಖಂಡಿಸಿದ್ದಾರೆ.
ಹಿಂದುತ್ವವಾದಿ ಹಾಗೂ ಹಿಂದುತ್ವಕ್ಕೆ ಅನ್ಯಾಯವಾದರೆ ಆಕ್ರಮಣಕಾರಿ ಹೋರಾಟದ ಮೂಲಕ ಪ್ರಸಿದ್ದರಾಗಿದ್ದ ಆರ್ಎಸ್ಎಸ್, ಹಿರಿಯರು, ಮಠಾಧೀಶರು ಸಲಹೆ ಮೇರೆಗೆ ಮುತಾಲಿಕ್ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಂತೆ ಅವರ ಸದಸ್ಯತ್ವವನ್ನು ರದ್ದು ಮಾಡಿರುವುದು ಸರಿಯಲ್ಲ ಎಂದರು