ಕ್ಷೇತ್ರದ ಜನತೆಯ ಬೇಡಿಕೆ ಈಡೇರಿಸಿದ್ದೇನೆ: ಮುನಿಯಪ್ಪ
ಕೆಜಿಎಫ್: ಕ್ಷೇತ್ರದ ಜನತೆ ಕಳೆದ ಆರು ಭಾರಿ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಬೇಡಿಕೆಗಳನ್ನು ಕೇಂದ್ರ ಯುಪಿಎ ಸರ್ಕಾರದ ಮೂಲಕ ಈಡೇರಿಸಿದ್ದೇನೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನಗರಸಭಾ ಮೈದಾನದಲ್ಲಿ ಆಯೋಜಿಸಿಗಿದ್ದ ಬ್ಲಾಕ್ ಕಾಂಗ್ರೆಸ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜಿಎಂಎಲ್ ಚಿನ್ನದ ಗಣಿ ಪುನರಾರಂಭಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ, ಈ ಭಾಗದ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿನ್ನದ ಗಣಿ ಪ್ರದೇಶದ ಜಮೀನಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಹಾಗೂ ವಿ.ಆರ್. ಸುದರ್ಶನ್ ಮಾತನಾಡಿ, ಜನತಾ ಪರಿವಾರ ಮತ್ತು ಬಿಜೆಪಿಯವರಿಂದ ಸಮರ್ಥ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಆಂಧ್ರಪ್ರದೇಶದಲ್ಲಿ 43 ಚೆಕ್ ಬೌನ್ಸ್ ಪ್ರಕರಣ ಹಾಗೂ ರೈತರಿಗೆ ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದು, ಕೆ.ಎಚ್. ಮುನಿಯಪ್ಪ ಅವರನ್ನು ಟೀಕಿಸುವ ಹಕ್ಕಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೂಪಕಲಾ ಶಶಿಧರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಹೀದ್ಶಾಜ್ಜಾದ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಬಿಸ್ಸೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಗುಡಿರೆಡ್ಡಿ, ಡಿ. ಜಯಪಾಲ್, ಸಂಪತ್ಕುಮಾರ್ ಇದ್ದರು.