ಜೀವ ಸೆಲೆಗೆ ಬೇಕು ಶುದ್ಧ ಪರಿಸರ: ಎಲ್.ಕೆ.ಕಾಳೇಗೌಡ
ಕಿಕ್ಕೇರಿ: ಪರಿಸರ ಮೇಲಿನ ಅತ್ಯಾಚಾರದಿಂದ ಪ್ರಾಕೃತಿಕ ಸಂಪತ್ತು ಬರಿದಾಗುತ್ತಿದೆ ಎಂದು ಹಿರಿಯ ವಕೀಲ ಎಲ್.ಕೆ.ಕಾಳೇಗೌಡ ಎಚ್ಚರಿಸಿದರು.
ಇಲ್ಲಿನ ಪತಾಂಜಲಿ ಯೋಗ ಸಮಿತಿ, ಬಾಲಾಜಿ ವಿದ್ಯಾ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವ ವಾತಾವರಣ ದಿನ ಹಾಗೂ ಭಗತ್‌ಸಿಂಗ್ ಸುಖದೇವ್, ರಾಜಗುರು ಬಲಿದಾನ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿ ಸಂಪತ್ತು ಅಮೂಲ್ಯವಾದುದು. ಮಾನವನು ಭೋಗ ಜೀವನಕ್ಕಾಗಿ ಮರ, ಗಿಡ, ಜಲ, ಗಾಳಿ ಎಲ್ಲವನ್ನು ಮಲೀನ ಮಾಡುತ್ತಿದ್ದಾನೆ. ವಾತಾವರಣ ವೈಪರೀತ್ಯದಿಂದ ಬೇಸಿಗೆಯಲ್ಲಿ ಅಕಾಲಿಕ ಮಳೆ ಸುರಿದಿದೆ ಎಂದರು. ಜನತೆ ಶುದ್ಧ ನೀರು, ಗಾಳಿ ಇಲ್ಲದೆ ಸಾಯುವಂಥ ಕಾಲ ಬರುವ ಮುನ್ನ ಪರಿಸರ ಉಳಿಸಿ ಉತ್ತಮ ವಾತಾವರಣ ನಿರ್ಮಿಸಲು ಮನೆಗೊಂದು ಮರ ನೆಟ್ಟು ಸಾಲು ಮರದ ತಿಮ್ಮಕ್ಕನ ಆದರ್ಶ ಪಾಲಿಸುವಂತೆ ತಿಳಿ ಹೇಳಿದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಜೇಟುಸಿಂಗ್ ದೇಶಕ್ಕಾಗಿ ಪ್ರಾಣತೆತ್ತ ಭಗತ್‌ಸಿಂಗ್, ರಾಜಗುರು, ಸುಖದೇವರ ಬಲಿದಾನ ಬಗ್ಗೆ ವಿವರವಾಗಿ ತಿಳಿಸಿದರು. ಜೇಟುಸಿಂಗ್, ಕರವೇ ಗುರುಮೂರ್ತಿ, ಪರಮೇಶ್, ತ್ರಿವೇಣಿ, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.