ಬಡ ಪ್ರತಿಭೆಯ ವ್ಯಾಸಂಗಕ್ಕೆ ನೆರವು
ಕೋಲಾರ: ಮಾಲೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿ ಏಳು ಚಿನ್ನದ ಪದಕ ಗಳಿಸಿರುವ ಬಡ ದಲಿತ ಪ್ರತಿಭೆ ಮಾಲೂರು ತಾಲೂಕಿನ ಚೌರಮಂಗಲದ ಸಿ.ಎಂ.ತಿಮ್ಮರಾಯಪ್ಪಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ಅವರು 25 ಸಾವಿರ ರು. ಆರ್ಥಿಕ ನೆರವು ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಿಮ್ಮರಾಯಪ್ಪನವರಿಗೆ ಹಣದ ಸಹಾಯ ಮಾಡಿದ ಅವರು, ಐಎಎಸ್ ಮಾಡಲು ಬೇಕಾದ ಎಲ್ಲ ರೀತಿಯ ಆರ್ಥಿಕ ಸಹಾಯ ಮಾಡುವುದಾಗಿ ಪ್ರಕಟಿಸಿದರು.
ಕೇವಲ ದಲಿತರಲ್ಲಿ ಮಾತ್ರ ಬಡ ಪ್ರತಿಭೆಗಳು ಇಲ್ಲ, ಎಲ್ಲಾ ವರ್ಗದಲ್ಲೂ ಬಡವರು ಇದ್ದಾರೆ. ತಿಮ್ಮರಾಯಪ್ಪ ತನಗೆ ಸಮಾಜದಿಂದ ಸಿಗುವ ಸಹಾಯವನ್ನು ಸದುಪಯೋಗ ಮಾಡಿಕೊಂಡು ತನ್ನಂತೆಯೇ ಸಮಾಜದಲ್ಲಿ ಇರುವ ಇನ್ನಿತರ ಬಡ ಪ್ರತಿಭೆಗಳಿಗೆ ಸಹಾಯ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಪ್ರತಿಭೆಗಳಿಗೆ ಬಡತನ ಅಡ್ಡಿಯಾಗದಂತೆ ಅವರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಿದಾಗ ಖಂಡಿತ ಅವರು ದೇಶಕ್ಕೆ ಕೊಡುಗೆಯಾಗುತ್ತಾರೆ ಎಂದರು. ನಗರಸಭೆ ಅಧ್ಯಕ್ಷೆ ಬಿ.ಎಂ. ಮುಬಾರಕ್, ಮನುಷ್ಯನಿಗೆ ಗುರಿಯಿದ್ದರೆ ಜೀವನದಲ್ಲಿ ಎಲ್ಲವನ್ನು ಸಾಧನೆ ಮಾಡಬಹುದು ಎನ್ನುವುದಕ್ಕೆ ತಿಮ್ಮರಾಯಪ್ಪ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿ, ನಮ್ಮ ತಂದೆಯ ಒಂದು ತಿಂಗಳ ವೇತನವನ್ನು ಈ ವಿದ್ಯಾರ್ಥಿಗೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ವ್ಯವಸ್ಥೆಯಲ್ಲಿ ಬಡ ದಲಿತ ವಿದ್ಯಾರ್ಥಿಯೊಬ್ಬ ಅದೇ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಬೆಂಗಳೂರು ವಿವಿಗೆ ಪ್ರಥಮ ರ್ಯಾಂಕ್ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ ಎಂದರು.
ಸಹಾಯಧನದ ಚೆಕ್ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿ ತಿಮ್ಮರಾಯಪ್ಪ, ನನ್ನ ತಂದೆ, ತಾಯಿ ಬಡಕೂಲಿಕಾರ್ಮಿಕರಾಗಿದ್ದು, ಇಂದಿಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಹಾಸ್ಟೆಲ್ನಲ್ಲಿದ್ದುಕೊಂಡು ವ್ಯಾಸಂಗ ಮಾಡಿದ್ದೇನೆ, ಮುಂದೆ ದೊಡ್ಡ ಹುದ್ದೆಗೆ ಹೋದಲ್ಲಿ ಸಮಾಜದ ಋಣ ತೀರಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಂಘದಿಂದ ಉಮಾಪತಿ ಅವರು ವಿದ್ಯಾರ್ಥಿ ತಿಮ್ಮರಾಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮತ್ತು ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕರನ್ನು ಸನ್ಮಾನಿಸಿದರು.
ಕಾಂಗ್ರೆಸ್ ಮುಖಂಡ ಅಶ್ವತ್ಥನಾರಾಯಣ, ಪತ್ರಕರ್ತ ವಾಸುದೇವಹೊಳ್ಳ ಇದ್ದರು.