'ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು'
ಗುಡಿಬಂಡೆ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಸಂಸ್ಥೆವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಏಡ್ಸ್ ತಡೆಗಟ್ಟುವ ವಿಧಾನಗಳ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಮರನಾರಾಯಣ, ಏಡ್ಸ್ ಈ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಗಳು, ಶಿಬಿರಗಳು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ನಗರ ಮತ್ತು ಗ್ರಾಮೀಣ ಪ್ರದೇಶ ನಾಗರಿಕರಲ್ಲಿ ಏಡ್ಸ್ ತಡೆಗಟ್ಟುವ ವಿಧಾನಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಈ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಸುರ್ದಮನ್ ಮಾತನಾಡಿ, 'ಯುವಕರಲ್ಲಿ ಏಡ್ಸ್ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಹೆಚ್ಚಿನ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಏಡ್ಸ್ ಎಂಬ ಕಾಯಿಲೆ ಕೇವಲ ಲೈಂಗಿಕ ಕ್ರಿಯೆಯಿಂದ ಮಾತ್ರ ಬರುವುದಿಲ್ಲ. ಸಂಸ್ಕರಿಸದ ಚುಚ್ಚುಮದ್ದುಗಳನ್ನು ಬಳಸುವುದರಿಂದ, ಪರೀಕ್ಷಿಸದೇ ರಕ್ತ ಪಡೆಯುವದರಿಂದ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ' ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಕೃಷ್ಣಪ್ಪ, ಅಶ್ವತ್ಥ್, ರಮೇಶ್, ಅಶ್ವತ್ಥಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.