ವಿದ್ಯುತ್ ಕಡಿತ: ಜನರು ತತ್ತರ
ಆರ್. ರಜನೀಕಾಂತ್
ಕೆಜಿಎಫ್: ವಿದ್ಯುತ್ ಅಭಾವದಿಂದ ತತ್ತರಿಸಿರುವ ಕ್ಷೇತ್ರದ ಜನತೆ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ 20 ದಿನಗಳಿಂದ ಬೆಸ್ಕಾಂ ಇಲಾಖೆ ವತಿಯಿಂದ ಯಾವುದೇ ಮುನ್ಸೂಚನೆ ಇಲ್ಲದೆ ಮನಬಂದಂತೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ಪರೀಕ್ಷೆಗೆ ಓದಲು ಕಷ್ಟವಾಗಿದೆ ಎಂಬುದು ಪೋಷಕರ ಆರೋಪ.ವಿದ್ಯುತ್ ಅಭಾವದಿಂದ ನಲ್ಲಿಗಳಲ್ಲಿ ಕುಡಿಯುವ ನೀರನ್ನು ಬಿಡದ ಕಾರಣ ಕ್ಷೇತ್ರದ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಕೊರತೆಯಿಂದಾಗಿ ಕೊಳವೆ ಬಾವಿಯಿಂದ ನೀರನ್ನು ತೆಗೆದು ವ್ಯವಸಾಯ ಮಾಡಲು ಸಾಧ್ಯವಾಗದ ಕಾರಣ ಬೆಳೆಗಳು ನಾಶವಾಗುತ್ತಿವೆ. ಬಗ್ಗೆ ಸಂಬಂಧಪಟ್ಟ ಬೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಮತ್ತು ಬೇಸಿಗೆ ಕಾಲ ಇದೇ ರೀತಿ ಎರಡು ತಿಂಗಳು ವಿದ್ಯುತ್ ಕಡಿತ ಮುಂದುವರಿಸಲಾಗುವುದು ಎಂಬುದು ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಕಾರ್ಖಾನೆ ಮಾಲೀಕರು ಕರೆಂಟ್ ಅಭಾವದಿಂದ ಉತ್ಪಾಧನೆ ಮಾಡಲು ಆಗದೆ ಕಾರ್ಮಿಕರಿಗೆ ವೇತನ ನೀಡಲು ಪರದಾಡುವಂತಾಗಿದೆ. ದಿನ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಕೆಲಸವಿಲ್ಲದೆ ರಾತ್ರಿಯ ವೇಳೆ ಮನೆಗಳಿಗೆ ತೆರಳದೆ ಅಂಗಡಿ, ಶೆಡ್ಗಳಲ್ಲಿ ಉಳಿದು ಬೆಳಗಿನಜಾವ ತನಕ ನಿದ್ದೆಕೆಟ್ಟು ಕೆಲಸಮಾಡಿ ಬರುವ ಸಂಪಾದನೆಯಿಂದ ತಮ್ಮ ಸಂಸಾರ ನಡೆಸಬೇಕಾಗಿದೆ. ಲೋಕಸಭೆ ಚುನಾವಣೆ ದಿನಾಂಕವನ್ನು ನಿಗದಿ ಪಡಿಸಿರುವ ಹಿನ್ನಲೆಯಲ್ಲಿ ನೀತಿ ಸಂಹಿತೆ ಕಾರಣದಿಂದ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಇತರೇ ರಾಜಕೀಯ ಪಕ್ಷಗಳ ಮುಖಂಡರು ನಿರಂತರವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಲು ಮುಂದಾಗುತ್ತಿಲ್ಲ. ತಮ್ಮನ್ನು ಕೇಳುವವರು ಇಲ್ಲ ಎಂಬಂತೆ ಅಧಿಕಾರಿಗಳು ಅವರು ಮನಬಂದಂತೆ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ