ಜಾನಪದ ಅಕಾಡೆಮಿ ಅಧ್ಯಕ್ಷರಿಗೆ ಇಂದು ಅಭಿನಂದನೆ
ಕೋಲಾರ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ರಿಗೆ ಜಾನಪದ ಶೈಲಿಯ ಅಭಿನಂದನಾ ಸಮಾರಂಭವನ್ನು ಮಾ.27 ರಂದು ನಗರದ ನಚಿಕೇತ ನಿಲಯದ ಆವಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಲಿತ ಸಂಘರ್ಷ ಸಮಿತಿ ಕರ್ನಾಟಕದ ಜಿಲ್ಲಾ ಶಾಖೆ, ಜಾನಪದ ಕಲಾವಿದರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್‌ರನ್ನು ಜಾನಪದ ಶೈಲಿಯಲ್ಲಿ ಅಲಂಕರಿಸಲಾದ ಎತ್ತಿನ ಬಂಡಿಯಲ್ಲಿ ಪ್ರವಾಸಿ ಮಂದಿರದಿಂದ ನಚಿಕೇತ ನಿಲಯದವರೆವಿಗೂ ಜಾನಪದ ಕಲಾ ತಂಡಗಳ ಮೆರವಣಿಗೆಯ ಮೂಲಕ ಕರೆ ತರಲು ಉದ್ದೇಶಿಸಲಾಗಿದೆ. ಜಾನಪದ ಶೈಲಿಯ ಚಪ್ಪರದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಸಿ.ಎಂ. ಮುನಿಯಪ್ಪ ಉದ್ಘಾಟಿಸಲಿದ್ದು, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆ ವಹಿಸಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ ಎ. ಮಂಜುನಾಥ್, ಪತ್ರಕರ್ತ ಕೆ.ಎಸ್. ಗಣೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ಭಾಗವಹಿಸುವರು.
ವೀರಳಪ್ಪಸ್ವಾಮಿ ಬ್ರಹ್ಮರಥೋತ್ಸವ
ಕೋಲಾರ: ತಾಲೂಕು ಮುದುವಾಡಿ ಗ್ರಾಪಂ ವಾನರಾಶಿ ಗ್ರಾಮದ ವೀರಳಪ್ಪಸ್ವಾಮಿ ಜಾತ್ರೆ ಮಾ.30 ರಿಂದ ಏ.8 ರವರೆಗೆ ನಡೆಯಲಿದೆ. ಏ.4ರಂದು ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಅಪಘಾತ: ವ್ಯಕ್ತಿ ಸಾವು
ಗುಡಿಬಂಡೆ: ಆಂಧ್ರ ಸರ್ಕಾರಿ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ-7ರ ಬುಶೆಟ್ಟಿ ಕ್ರಾಸ್ ಬಳಿ ಬುದವಾರ ಸಂಭವಿಸಿದೆ. ಮೃತನನ್ನು ಸಂತಕಲ್ಲಳ್ಳಿ ಗ್ರಾಮದ ಮಂಜುನಾಥ್(35) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನೇಮಕ
ಕೆಜಿಎಫ್: ಆಲ್ ಇಂಡಿಯ ಕಾಂಗ್ರೆಸ್ ಕಮಿಟಿ (ಎಸ್)ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೆಸ್ಸಾನಿಯೋ ಸಿಲ್ವರ್ ಅವರು ಕೆಜಿಎಫ್‌ನ ಜಾವೀದ್‌ಪಾಷಾರನ್ನು ಭಾರತೀಯ ಕಾಂಗ್ರೆಸ್ ಸಮಿತಿ (ಎಸ್)ನ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.