ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ

Rashmi Kasaragodu
Updated On : 27 Mar 2014, 1:03 am

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬ ಈ ಭಾಗದ ಜನರ ದಶಕದ ಕನಸನ್ನು ನನಸು ಮಾಡಿರುವ ನನ್ನ ಮೇಲೆ ಮತದಾರರು ನಂಬಿಕೆಯಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದರೆ, ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಅವರು ಶಿಡ್ಲಘಟ್ಟ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪ್ರಸ್ತುತ ಲೋಕಸಭಾ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದುಕೊಂಡಾಗ ಮಾತ್ರ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ದೇವೇಗೌಡರು ಮತ್ತು ನಾನು ವ್ಯಾಪಕ ಪ್ರಚಾರ ಕೈಗೊಳ್ಳಬೇಕಾದ ಜವಾಬ್ದಾರಿ ಹೊಂದಿದ್ದು ಇಲ್ಲಿ ನನ್ನ ಗೆಲುವಿಗೆ ಹೆಚ್ಚಿಗೆ ನಾನು ತಿರುಗಾಡಲು ಕಷ್ಟವಾಗುತ್ತದೆ. ಪ್ರತಿ ಹಳ್ಳಿ ಹಳ್ಳಿಗಳಿಗೂ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಇದನ್ನರಿತು ಪಕ್ಷದ ಕಾರ್ಯಕರ್ತರು ಸ್ವಯಂ ಕುಮಾರಸ್ವಾಮಿಗಳಿಗಾಗಿ ಪ್ರಚಾರ ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ಅಳವಾಗಿ ತಿಳಿದುಕೊಂಡಿದ್ದು, ಇಲ್ಲಿನ ಜನರ ಹಿತ ಕಾಪಾಡುವ ಉದ್ದೇಶ ಹೊಂದಿದ್ದೇನೆ. ಕಳೆದ ಐದು ವರ್ಷಗಳಲ್ಲಿ ವೀರಪ್ಪ ಮೊಯ್ಲಿರವರು ಕ್ಷೇತ್ರದ ಸಮಸ್ಯೆಗಳ ಕಡೆಗೆ ಗಮನಕೊಡಲಿಲ್ಲ. ರಾಜಕೀಯ ಪುನರ್ ಜನ್ಮ ನೀಡಿದ ಜನರ ಹಿತವನ್ನೇ ಮರೆತರು. ಕೇಂದ್ರ ಸಚಿವರಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿಗೆ ಅನುದಾನ ತರಬಹುದಾಗಿತ್ತು. ಆದರೆ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೀಗ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮಂತ್ರ ಜಪ ಮಾಡುತ್ತಿದ್ದಾರೆ. ಮೊಯ್ಲಿರವರ ಸುಳ್ಳು ಭರವಸೆಗಳಿಗೆ ಜನ ಮಾರು ಹೋಗಬಾರದು. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅನೇಕರ ಒತ್ತಡ ಹಾಕಿದ ಕಾರಣ ಅವರ ಅಭಿಮಾನಕ್ಕೆ ತಲೆಬಾಗಿದ್ದೇನೆ. ಆದರೆ, ಇದನ್ನು ಕೆಲವರು ಪಲಾಯನ ಎನ್ನುತ್ತಿದ್ದಾರೆ. ಮೋದಿ ಅಲೆಯಲ್ಲಿ ಗೆಲ್ಲಲು ಹೊರಟಿದ್ದಾರೆ. ಅವರ ಬಗ್ಗೆ ಮತದಾರರು ಸರಿಯಾಗಿ ತಿಳಿದುಕೊಳ್ಳಬೇಕೆಂದರು. ಶಾಸಕರಾದ ಜಮೀರ್ ಅಹಮದ್, ಎಂ. ರಾಜಣ್ಣ, ಮಾಜಿ ಶಾಸಕರಾದ ಅನಿತಾ ಕುಮಾರಸ್ವಾಮಿ ಕೆ.ಪಿ. ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement