ವಿ.ಮುನಿಯಪ್ಪಗೆ ಸೂಕ್ತ ಸ್ಥಾನಮಾನ
ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಭರವಸೆ
ಶಿಡ್ಲಘಟ್ಟ: ಲೋಕಸಭಾ ಚುನಾವಣೆಯ ನಂತರ ಮಾಜಿ ಸಚಿವ ವಿ.ಮುನಿಯಪ್ಪ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಕಳೆದ ವಿಧಾನಸಭೆಯಲ್ಲಿ ಸೋತಿರುವ ವಿ.ಮುನಿಯಪ್ಪ ಅವರಿಗೆ ಸೂಕ್ತಸ್ಥಾನಮಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ವಿ. ಮುನಿಯಪ್ಪ ಅವರಿಗೆ ಅನ್ಯಾಯ ಮಾಡಿದ್ದೇನೆ ಎಂದು ಕ್ಷೇತ್ರದಲ್ಲಿ ಕೆಲವು ವ್ಯಕ್ತಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ಮುನಿಯಪ್ಪ ಅವರಿಗೆ ಅನ್ಯಾಯ ಮಾಡಿಲ್ಲ. ಯಾವ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ' ಎಂದರು. ನಂತರ ಮಾತನಾಡಿದ ಮಾಜಿ ಸಚಿವ ವಿ.ಮುನಿಯಪ್ಪ, 'ಯಾವತ್ತೂ ನಾನೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ' ಎಂದು ಭಾವಕರಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಸದಸ್ಯ ನಸೀರ್ ಅಹಮದ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಶಶಿಧರ್, ಬಿಸೇಗೌಡ, ವಕ್ತಾರ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ಕಮಲಮ್ಮ, ಜಿಪಂ ಸದಸ್ಯರಾದ ಎಸ್.ಎಂ. ನಾರಾಯಣಸ್ವಾಮಿ, ಸತೀಶ್, ತಾಪಂ ಮಾಜಿ ಅಧ್ಯಕ್ಷ ಮೌಲಾ, ಕಾಂಗ್ರೆಸ್ ಯುವ ಮುಖಂಡ ಅಬ್ದುಲ್ ಗಪೂರ್, ಮುಬಾರಕ್ ಖಾನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ತೋಪಡ ರಾಮಚಂದ್ರ, ಉಪಾಧ್ಯಕ್ಷ ಚೀಮನಹಳ್ಳಿ ಗೋಪಾಲ್ ಸೇರಿದಂತೆ ಅನೇಕರಿದ್ದರು.
ಮುನಿಯಪ್ಪ ಢ/ಡ ಮುನಿಯಪ್ಪ
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸಚಿವ ವಿ.ಮುನಿಯಪ್ಪ ನಡುವಿನ ಭಿನ್ನಮತ ಸ್ಫೋಟಗೊಂಡಿತು. ಮೊದಲಿಗೆ ಕೋಲಾರ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮಾತನಾಡಿದ ಬಳಿಕ, ಭಾಷಣಕ್ಕೆ ನಿಂತ ಮಾಜಿ ಸಚಿವ ವಿ.ಮುನಿಯಪ್ಪ ಅವರು, 'ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಿಂದಲೇ ನಾನು ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು.
ಎಲ್ಲೂ ಇದ್ದ ಕೆ.ಎಚ್.ಮುನಿಯಪ್ಪ ಅವರನ್ನು ರಾಜಕೀಯಕ್ಕೆ ತಂದವನೇ ನಾನು. ಅಂದಿನ ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷರು, ಸಂಸದರ ಕಾಲು ಹಿಡಿದು ಆಗ ವೈ.ರಾಮಕೃಷ್ಣ ಅವರಿಗೆ ನಿಗದಿಯಾಗಿದ್ದ ಟಿಕೆಟ್ ಅನ್ನು ಕೆ.ಎಚ್.ಮುನಿಯಪ್ಪವರಿಗೆ ಸಿಗುವಂತೆ ಮಾಡಿದ್ದೆ. ಅದರ ಪ್ರತಿಫಲವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲಬೇಕಾಯಿತು' ಎಂದು ಆಕ್ರೋಶವಾಗಿ ಹೇಳಿದರು. ಇಷ್ಟೆಲ್ಲಾ ಆಕ್ರೋಶ ವ್ಯಕ್ತಪಡಿಸಿದರು ವಿ.ಮುನಿಯಪ್ಪ ಅವರು, ಶಿಡ್ಲಘಟ್ಟ ಕ್ಷೇತ್ರದ ಹೊರತಾಗಿ ಬೇರೆಡೆ ಪ್ರಚಾರಕ್ಕೆ ಬರುವುದಿಲ್ಲ ನಾನು. ಭಗವಂತ ನಿಮಗೆ ಒಳ್ಳೆಯದು ಮಾಡಲಿ ಎಂದು ಭಾವಕರಾಗಿ ಹೇಳಿದರು.