ವಿದ್ಯಾರ್ಥಿಗಳನ್ನು ಥಳಿಸಿದ ಮುಖ್ಯ ಶಿಕ್ಷಕ ಅಮಾನತು
ಮಾಲೂರು: ಕನ್ನಡ ವಿಷಯದಲ್ಲಿ ಕಡಿಮೆ ಅಂಕ ಪಡೆದ 6 ನೇ ತರಗತಿಯ ವಿದ್ಯಾರ್ಥಿಯನ್ನು ಬಾರಿಸಿದ್ದ ತಾಲೂಕಿನ ತಾಳಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಮೇಶ್ನನ್ನು ಅಮಾನತು ಮಾಡುವಂತೆ ಡಿಡಿಪಿಐ ರವರಿಗೆ ಶಿಫಾರಸ್ಸು ಮಾಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಶಾಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ಬರೆಯಲು ಬಂದಿದ್ದ 6 ನೇತರಗತಿ ವಿದ್ಯಾರ್ಥಿಗಳಾದ ವಿಶಾಲ್, ಮಧುಸೂಧನ್, ಸಂತೋಷರನ್ನು ತನ್ನ ಕಚೇರಿಗೆ ಕರೆಸಿದ್ದ ಮುಖ್ಯಶಿಕ್ಷಕ ರಮೇಶ್ ಸೋಮವಾರ ನಡೆದಿದ್ದ ಕನ್ನಡ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದನ್ನು ಅಕ್ಷೇಪಿಸಿ ಕೋಲಿನಿಂದ ಮನಸೋ ಇಚ್ಚೆ ಥಳಿಸಿದ್ದ. ಇದರಿಂದ ವಿಶಾಲ್ ಕುಸಿದು ಬಿದ್ದಿದ್ದನಲ್ಲದೇ ಮೂವರು ಮಕ್ಕಳಿಗೆ ಬಾಸುಂಡೆ ಬಂದಿತ್ತು. ಮುಖ್ಯ ಶಿಕ್ಷಕನ ಈ ರಾಕ್ಷಸ ಪ್ರವೃತ್ತಿ ಖಂಡಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಬುಧವಾರ ಶಾಲೆಗೆ ಭೇಟಿ ನೀಡಿದ್ದ ಬಿಇಒ ರವರು ಮುಖ್ಯಶಿಕ್ಷಕ ರಮೇಶ್ನನ್ನು ವಿಚಾರಣೆ ಮಾಡಿದರಲ್ಲದೇ ಪೆಟ್ಟು ತಿಂದ ಮಕ್ಕಳು, ಪೋಷಕರು ಹಾಗೂ ಶಾಲಾ ಸಮಿತಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಸಿಆರ್ಪಿ ಶ್ರೀಧರ್ರೆಡ್ಡಿ ವರದಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣಿ ಮುಖ್ಯಶಿಕ್ಷಕ ರಮೇಶ್ರನ್ನು ಅಮಾನತು ಮಾಡುವಂತೆ ಡಿಡಿಪಿಐ ರವರಿಗೆ ಶಿಪಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.