ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ
ಗುಡಿಬಂಡೆ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ತಿಳಿಸಿದ್ದಾರೆ. ಈ ಹಿಂದೆ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವತ್ಥ ನಾರಾಯಣಪ್ಪ ಪದೋನ್ನತಿ ಪಡೆದ ಸಲುವಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪ್ರಸ್ತುತ ತೆರವಾಗಿರುವ ಪ್ರಧಾನ ಕಾಯದರ್ಶಿ ಸ್ಥಾನ ಮತ್ತು ಸಂಘಟನಾ ಕಾರ್ಯದರ್ಶಿ ವಿ.ಪದ್ಮಾವತಮ್ಮನವರ ವರ್ಗಾವಣೆಯಿಂದಾಗಿ ಖಾಲಿಯಾಗಿರುವ ಸ್ಥಾನಗಳಿಗೆ ಕ್ರಮವಾಗಿ ಆರ್. ರಾಜಪ್ಪ ಹಾಗೂ ಮುಬೀನ್ ತಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿಗೆ ಮರಳಿದ ಮಾಜಿ ಶಾಸಕ ವೆಂಕಟಮುನಿಯಪ್ಪ
ಕೋಲಾರ: ಅನಿವಾರ್ಯ ಕಾರಣದಿಂದ ಬಿಜೆಪಿ ಬಿಟ್ಟಿದ್ದೆ, ಪಕ್ಷದ ನಾಯಕರು ಸೂಕ್ತವಾದ ಸ್ಥಾನಮಾನ, ಗೌರವ ನೀಡುವ ಭರವಸೆ ನೀಡಿರುವುದರಿಂದ ಹಾಗೂ ನರೇಂದ್ರ ಮೋದಿಯವರ ನದಿ ಜೋಡಣೆಯ ಕನಸು ನನಸಾಗಿಸಲು ಮತ್ತೆ ಬಿಜೆಪಿ ಸೇರಿರುವುದಾಗಿ ಬಂಗಾರಪೇಟೆ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಬಲಗೈ ಜನಾಂಗಕ್ಕೆ ಬಿಜೆಪಿ ನೀಡಿದಷ್ಟು ಅಧಿಕಾರ ಮತ್ತು ಸ್ಥಾನಮಾನವನ್ನು ಜಿಲ್ಲೆಯಲ್ಲಿ ಬೇರಾವ ಪಕ್ಷವೂ ನೀಡಿಲ್ಲ, ತಾನೂ ಸೇರಿದಂತೆ ಸಂಪಂಗಿ, ಶಾಸಕಿ ವೈ. ರಾಮಕ್ಕ ಅವರಿಗೆ ಶಾಸಕರಾಗಲು ಪಕ್ಷ ಅವಕಾಶ ಮಾಡಿಕೊಟ್ಟಿದೆ, ಡಿ.ಎಸ್. ವೀರಯ್ಯ ಅವರಿಗೆ ಎರಡು ಬಾರಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ, ಮುಳಬಾಗಿಲಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುನಿಕೃಷ್ಣ ಅವರಿಗೆ ಟಿಕೆಟ್ ನೀಡಿದ್ದು ಬಿಜೆಪಿ ಎಂದು ಉದಾಹರಿಸಿದರು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 3.5 ಲಕ್ಷಕ್ಕೂ ಹೆಚ್ಚು ಬಲಗೈ ಜನಾಂಗವಿದ್ದು ದೇಶದ ಸಮಗ್ರತೆ, ಐಕ್ಯತೆ ದೃಷ್ಟಿಯಿಂದ ಎಲ್ಲರೂ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬರದಿಂದ ತತ್ತರಿಸಿರುವ ಕೋಲಾರ ಜಿಲ್ಲೆ ಹಸಿರಾಗಲು ಮೋದಿಯಂತಹ ನದಿ ಜೋಡಣೆಯ ಕನಸು ಹೊತ್ತ ನಾಯಕರನ್ನು ಪ್ರಧಾನಿಯಾಗಲು ಪ್ರತಿಯೊಬ್ಬರು ಕೈಜೋಡಿಸಿದರೆ ಮೋದಿ ಕನಸು ಖಂಡಿತ ನನಸಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಡೀ ದೇಶದಲ್ಲೇ ಮೋದಿ ಅಲೆ ಇರುವಾಗ ಕೋಲಾರದಲ್ಲೂ ಕಾಂಗ್ರೆಸ್ ಧೂಳಿಪಟವಾಗುವುದರಲ್ಲಿ ಅನುಮಾನವಿಲ್ಲವೆಂದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಮಸಂದ್ರ ನಾಗರಾಜ್, ಜಿಲ್ಲೆಯ ಬಲಗೈಜನಾಂಗದ ನಾಯಕರಾದ ಡಿ.ಎಸ್. ವೀರಯ್ಯ, ವೆಂಕಟಮುನಿಯಪ್ಪ ಅವರ ನೇತೃತ್ವದಲ್ಲಿ ಕೆಲಸ ಮಾಡಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದಾಗಿ ತಿಳಿಸಿದರು.
ಡಿ.ಎಸ್. ವೀರಯ್ಯರನ್ನು ಮನವೊಲಿಸಿ ಪ್ರಚಾರಕ್ಕೆ ಕರೆತರುತ್ತೇವೆ, ಅವರ ನಾಯಕತ್ವದಲ್ಲೇ ಜನರ ಬಳಿಗೆ ತೆರಳುತ್ತೇವೆ ಎಂದ ಅವರು, ಬಲಗೈ ಜನಾಂಗಕ್ಕೆ ಬಿಜೆಪಿ ಮಾತ್ರ ಹೆಚ್ಚಿನ ಅಧಿಕಾರ ಮತ್ತು ಸ್ಥಾನಮಾನ ನೀಡಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ವೈ. ಚಂದ್ರಶೇಖರ್, ಹಿರಿಯ ಮುಖಂಡ ಸತ್ಯನಾರಾಯಣರಾವ್ ಇದ್ದರು.