ಎಚ್ಡಿಕೆ ಆಸ್ತಿ: ಜೆಡಿಯು ಆಕ್ಷೇಪ
ಕುಮಾರಸ್ವಾಮಿ ತಮ್ಮ ಪುತ್ರನ ಆಸ್ತಿ ವಿವರ ನೀಡಿಲ್ಲ: ದೂರು
ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಆಸ್ತಿಪಾಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಮರ್ಪಕವಾಗಿ ತಿಳಿಸಿಲ್ಲ. ಇದರಿಂದ ಅಫಿಡವಿಟ್ನಲ್ಲಿ ಅಪೂರ್ಣ ಮಾಹಿತಿಯಿರುವ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ಅಂಗೀಕರಿಸಬಾರದೆಂದು ತಕರಾರು ತೆಗೆಯಲಾಗಿದೆ.
ಈ ಬಗ್ಗೆ ಜೆಡಿಯು ಅಭ್ಯರ್ಥಿ ಜಿ.ಕೆ.ಸಿ ರೆಡ್ಡಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕುಮಾರಸ್ವಾಮಿ ಸಲ್ಲಿಸಿರುವ ಎರಡೂ ನಾಮಪತ್ರಗಳಲ್ಲೂ ನೀಡಲಾದ ಆಸ್ತಿವಿವರಗಳಲ್ಲಿ ತಮ್ಮ ಪತ್ನಿ ಹೊಂದಿರುವ ಸಂಪತ್ತಿನ ಬಗ್ಗೆ ತಿಳಿಸಿದ್ದಾರೆ. ಆದರೆ, ತಮ್ಮ ಮಗನ ಬಳಿ ಇರುವ ಆಸ್ತಿಪಾಸ್ತಿಯ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ ಅವರು ತಮ್ಮ ಆಕ್ಷೇಪದಲ್ಲಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಪುತ್ರ ಅವರೊಂದಿಗೆ ವಾಸವಾಗಿದ್ದಾರೆ. ಅವರು ತಮ್ಮನ್ನು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಹೀಗಿದ್ದರೂ ಕುಮಾರಸ್ವಾಮಿ ಅವರು ತಮ್ಮ ಮಗ ಹೊಂದಿರುವ ಆಸ್ತಿ ಬಗ್ಗೆ ತಿಳಿಸಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿ.ಕೆ.ಸಿ.ರೆಡ್ಡಿ ಒತ್ತಾಯಿಸಿದ್ದಾರೆ. ಆಯೋಗದ ದೂರು ವಿಭಾಗಕ್ಕೆ ಸಲ್ಲಿಸಿ: ರೆಡ್ಡಿ ಅವರ ಮನವಿಯನ್ನು ಆಲಿಸಿದ ಚುನಾವಣಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗದ ದೂರು ವಿಭಾಗಕ್ಕೆ ದೂರು ಸಲಿಸಬೇಕೆಂದು ದೂರುದಾರರಿಗೆ ಸೂಚನೆ ನೀಡಿದ್ದಾರೆ. ಮಾ.27ರಂದು ಕ್ಷೇತ್ರದಲ್ಲಿ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಮುಗಿದಿದ್ದು, ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ನಾಮಪತ್ರಗಳು ಸಹ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೆಯೂ ದೂರು
ಈ ಹಿಂದೆಯೂ ಸಹ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಆಸ್ತಿ ವಿವರಕ್ಕೆ ಸಂಬಂಧಪಟ್ಟಂತೆ ವಿವಾದಕ್ಕೆ ಗುರಿಯಾಗಿದ್ದರು. ಅಫಿಡವಿಟ್ ನಲ್ಲಿ ರಾಧಿಕಾ ಕುಮಾರಸ್ವಾಮಿಯ ಆಸ್ತಿಪಾಸ್ತಿಯ ವಿವರಗಳನ್ನು ತಿಳಿಸಿಲ್ಲ ಎಂದು ನಾಗಲಕ್ಷ್ಮೀ ಎನ್ನುವವರು ದೂರು ಕೊಟ್ಟಿದ್ದರು. ಹಾಗೆಯೇ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಚುನಾವಣೆಯಲ್ಲಿ ಕುಮಾರಸ್ವಾಮಿಯ ಆಯ್ಕೆಯಾಗಿರುವುದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು.