ಕಾಂಗ್ರೆಸ್ ಗೆಲವಿಗೆ ಶ್ರಮ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ
ಮಾಲೂರು: 6 ಬಾರಿ ಕ್ಷೇತ್ರದಲ್ಲಿ ಜಯಗಳಿಸಿದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಎರಡು ಬಾರಿ ಶಾಸಕನಾಗಿದ್ದಾಗ ತಾಲೂಕಿನ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರದಿಂದ ಬಂದ ಹಣವೇ ಹೆಚ್ಚು. ರು. 45 ಕೋಟಿ ಮಾರ್ಕಂಡೇಯ ಡ್ಯಾಂ ಫೈಪು ಲೈನ್ ಕಾಮಗಾರಿಯಲ್ಲಿ ಕೆ.ಎಚ್. ಮುನಿಯಪ್ಪ ನೀಡಿರುವ ಕೇಂದ್ರದ ಹಣ ಯೋಜನೆಯ ಶೇ.80 ರಷ್ಟು ಎಂದರು. ಮುಖಂಡ ಚೆನ್ನಕೇಶವ ಮಾತನಾಡಿದರು. ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘುನಾಥ್,ಪುರಸಭೆ ಸದಸ್ಯ ಲಕ್ಷ್ಮಿನಾರಾಯಣ್, ಸಿ.ಪಿ. ವೆಂಕಟೇಶ್, ಸೋಮಣ್ಣ, ಪುಟ್ಟಸ್ವಾಮಿ, ಲೋಕೇಶ್, ಅಮರಾವತಿ, ಕೃಷ್ಣಪ್ಪ ಇದ್ದರು.
ಎಲ್ಲ ನಾಮಪತ್ರಗಳೂ ಅಂಗೀಕಾರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಸಿರುವ ಎಲ್ಲ 36 ನಾಮಪತ್ರಗಳು ಅಂಗೀಕಾರವಾಗಿವೆ. ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ, ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ತಲಾ 2, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಸೇರಿ 23 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಸಿದ್ದರು. ಮಾ.29 ರವರೆಗೆ ನಾಮಪತ್ರ ವಾಪಸು ಪಡೆಯಲು ಅವಕಾಶವಿರುವುದರ ನಡುವೆ ಅಭ್ಯರ್ಥಿಗಳು ಅದ್ಧೂರಿ ಪ್ರಚಾರದತ್ತ ಮುಖ ಮಾಡಿದ್ದಾರೆ.