ಕುಡಿವ ನೀರಿಗೆ ಆಗ್ರಹಿಸಿ ಕಚೇರಿಗೆ ಬೀಗ
ಚಿಂತಾಮಣಿ: ಗ್ರಾಮಕ್ಕೆ ನೀರಿಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಬೀಗ ಜಡಿದು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ತಾಲೂಕಿನ ಭೂಮಿಶೆಟ್ಟಹಳ್ಳಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಕಳೆದ 2 ವರ್ಷಳಿಂದ ನೀರಿನ ಸಮಸ್ಯೆ ಕಾಡುತ್ತಿದ್ದು, ಈ ಬಗ್ಗೆ ಗ್ರಾಪಂ ಕಾರ್ಯದರ್ಶಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿ ಕಚೇರಿಗೆ ಬೀಗ ಜಡಿದರು.
ಕೊಳವೆ ಬಾವಿ ಕೊರೆಸಿ ನೀರಿದ್ದರೂ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಪಂಪು-ಮೋಟಾರ್ ಅಳವಡಿಸದೆ ಗುತ್ತಿಗೆದಾರ ಮತ್ತು ಜೆಇ ಪ್ರಸಾದ್ ನಿರ್ಲಕ್ಷ್ಯ ತೋರಿದ್ದು, ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ಸುದ್ದಿ ತಿಳಿದ ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ದೂರವಾಣಿ ಮೂಲಕ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಎರಡು ದಿನಗಳಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಗ್ರಾಮಸ್ಥರಾದ ಮಮತಮ್ಮ, ಹೂವಮ್ಮ, ಮಂಜುಳ, ಸಾವಿತ್ರಮ್ಮ, ಚೌಡಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.