ಕ್ಷೇತ್ರದಿಂದ ಓಡಿಸಲು ಕಾಂಗ್ರೆಸ್, ಬಿಜೆಪಿ ಸಂಚು
ಕನ್ನಡಪ್ರಭ ವಾರ್ತೆ, ಕೋಲಾರ, ಮಾ.27
ತನ್ನ ಜಾತಿ ಪತ್ರದ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಕ್ಷೇತ್ರದಿಂದ ಓಡಿಸಲು ಕುತಂತ್ರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ತಿಳಿಸಿದರು. ಜಾತಿ ಪತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಅಭ್ಯರ್ಥಿ ನಾರಾಯಣಸ್ವಾಮಿ ಸಲ್ಲಿಸಿದ ಆಕ್ಷೇಪವನ್ನು ವಿಚಾರಣೆ ನಂತರ ತಳ್ಳಿಹಾಕಿ ತನ್ನ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸ್ವೀಕೃತಗೊಳಿಸಿದ್ದಾರೆ. ಇದು ನನಗೆ ಸಿಕ್ಕ ಮೊದಲ ಜಯ ಎಂದು ಸುದ್ದಿಗಾರರಿಗೆ ತಿಳಿಸಿದರು. ಕ್ಷೇತ್ರದಿಂದ ನನ್ನನ್ನು ಓಡಿಸಲು ನಾಮಪತ್ರ ಸಲ್ಲಿಕೆಗೆ ಮುಂಚಿತಾಗಿಯೇ ಕಿರುಕುಳ ಆರಂಭಿಸಿದ ಕಾಂಗ್ರೆಸ್ ಮತ್ತು ಬಿಜೆಪಿಯವರು ಸ್ಪರ್ಧೆಯಿಂದ ತಮ್ಮನ್ನು ದೂರವಿಟ್ಟು ಅವಕಾಶವಾದಿ ರಾಜಕಾರಣ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದರು.
ಈ ಕೇಶವಗೆ, ಆ ಕೇಶವ ಪೈಪೋಟಿ!
ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಅವರಿಗೆ ಅದೇ ಹೆಸರಿನ ಮತ್ತೊಬ್ಬ ಎದುರಾಳಿಯಾಗಿದ್ದಾರೆ! ಚಿಂತಾಮಣಿಯ ಕೆ.ಕೇಶವ್ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ಅಂಗೀಕೃತವಾಗಿದೆ. ಆದರೆ ಈ ಸಂದರ್ಭದಲ್ಲಿ ಅಭ್ಯರ್ಥಿ ಇರಲಿಲ್ಲ. ತನ್ನ ಹೆಸರಿನವ ಸಲ್ಲಿಸಿದ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ.ರವಿ ಸ್ವೀಕರಿಸುತ್ತಿರುವುದಾಗಿ ಪ್ರಕಟಿಸಿದಾಗ, ಜೆಡಿಎಸ್ ಅಭ್ಯರ್ಥಿ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಇವನ್ಯಾರಪ್ಪ ಎಂದು ಹಣೆ ಚೆಚ್ಚಿಕೊಂಡರು.
ಹಾರ್ನಹಳ್ಳಿ - ಶಶಿಕಾಂತ್ ಮುಖಾಮುಖಿ!
ರಾಜ್ಯದ ಇಬ್ಬರು ಹಿರಿಯ ವಕೀಲರಾದ ಅಶೋಕ್ ಹಾರ್ನಹಳ್ಳಿ ಮತ್ತು ಶಶಿಕಾಂತ್ ಅವರಿಗೆ ಕೋಲಾರದ ಕಕ್ಷೀದಾರರೊಂದಿಗೆ ಅವಿನಾಭ ಸಂಬಂಧವಿದೆ.
2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ, ಹಾಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ವಕೀಲ ಶಶಿಕಾಂತ್ ವಕಾಲತ್ತು ವಹಿಸಿದ್ದರು. ಅದೇ ರೀತಿ, ಬಿಜೆಪಿಯ ಬಿ.ಪಿ.ವೆಂಕಟಮುನಿಯಪ್ಪ ಪರವಾಗಿ ವಾದಿಸಿದ್ದ ಅಶೋಕ್ ಹಾರ್ನಹಳ್ಳಿ ಗುರುವಾರ ಮತ್ತೆ ಮುಖಾಮುಖಿಯಾಗಿದ್ದರು. ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಅವರು ತನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದರಿಂದ ಪರವಾಗಿ ವಾದಿಸಲು ಅಶೋಕ್ ಹಾರ್ನಹಳ್ಳಿ ಅವರನ್ನು ನಿಯೋಜಿಸಿದ್ದರು. ಕೇಶವ ವಿರುದ್ಧ ಅಕ್ಷೇಪಣೆ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ಶಶಿಕಾಂತ್ ವಾದಿಸಿದರು. ಕೇಶವ ಪರವಾಗಿ ಬಂದಿದ್ದ ಅಶೋಕ್ ಹಾರ್ನಹಳ್ಳಿ ಜೊತೆ ಬೆಂಗಳೂರಿನಿಂದ ಪುತ್ರ ಅಭಿಜಿತ್ ಹಾರ್ನಹಳ್ಳಿ ಸೇರಿದಂತೆ ಆರುಕ್ಕೂ ಹೆಚ್ಚು ವಕೀಲರಿದ್ದರು. ಇತ್ತ ಶಶಿಕಾಂತ್ಗೆ ಸಹಾಯ ಮಾಡಲು ಮೂವರು ವಕೀಲರಿದ್ದರು.