ಜೆಡಿಎಸ್ ಅಭ್ಯರ್ಥಿಯ ನಿರಾಧಾರ ಆರೋಪ
ಕೋಲಾರ: ಜಾತಿ ಪತ್ರ ವಿವಾದಕ್ಕೆ ಸಂಬಂಧಿಸಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಕಾಂಗ್ರೆಸ್ ವಿರುದ್ಧ ನಿರಾಧಾರ ಆರೋಪ ಮಾಡುವ ಮೂಲಕ ಬಾಲಿಷ ರಾಜಕಾರಣ ಮಾಡುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲ್ಕುಮಾರ್ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೆ. ಕೇಶವರವರ ಜಾತಿ ಪ್ರಮಾಣ ಪತ್ರ ಕುರಿತು ಉಂಟಾಗಿರುವ ಗೊಂದಲಕ್ಕೆ ಕಾಂಗ್ರೆಸ್ ಕಾರಣವಲ್ಲ, ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಜೆಡಿಎಸ್ ಜೊತೆ ಗುರುತಿಸಿಕೊಂಡಿರುವವರು ಅಕ್ಷೇಪ ಮಾಡಿದ್ದನ್ನು ಖುದ್ಧು ಗಮನಿಸಿರುವ ಕೇಶವ, ತಮ್ಮ ನಾಮಪತ್ರ ಸ್ವೀಕೃತಗೊಂಡ ನಂತರ ಮಾಧ್ಯಮಗಳ ಎದುರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವುದನ್ನು ಗಮನಿಸಿದರೆ ಅಪ್ರಬುದ್ಧ ರಾಜಕಾರಣಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಟೀಕಿಸಿದ್ದಾರೆ. ಆಧಾರವಿಲ್ಲದೆ ಕಾಂಗ್ರೆಸ್ ಬಗ್ಗೆ ಮತ್ತು ನಮ್ಮ ಮುಖಂಡರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.