ದೇಶ ಮುನ್ನೆಡೆಸುವ ಶಕ್ತಿ ಕಾಂಗ್ರೆಸ್ಗೆ ಇದೆ
ಬಂಗಾರಪೇಟೆ: ದೇಶವನ್ನು ಸುಭದ್ರವಾಗಿ ಮುನ್ನೆಡೆಸುವ ಶಕ್ತಿ ಕಾಂಗ್ರೆಸ್ಗೆ ಮಾತ್ರ ಇದ್ದು ಡೋಂಗಿ ನಾಯಕರನ್ನು ತಿರಸ್ಕರಿಸುವಂತೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕರೆ ನೀಡಿದರು.
ತಾಲೂಕಿನ ಬೂದಿಕೋಟೆ ಹೋಬಳಿಯಲ್ಲಿ ಗುರುವಾರ ಮಿಂಚಿನ ಪ್ರಚಾರ ಮಾಡಿದ ಶಾಸಕರು, ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಎಷ್ಟು ಭ್ರಷ್ಟಾಚಾರ ಮಾಡಿತು ಎಂಬುದು ಜನತೆಗೆ ಗೊತ್ತಿದೆ. ಇಂತಹ ಪಕ್ಷಕ್ಕೆ ಏನು ನೋಡಿ ಮತ ಹಾಕಬೇಕು ಎಂದು ಪ್ರಶ್ನಿಸಿದರು. ಶಾಸಕರಿಗೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಹೊಸರಾಯಪ್ಪ, ರಾಮಪ್ಪ, ನಾಗವೇಣಮ್ಮ, ಎಸ್.ಎಂ. ಗೋಪಾಲ್ ಇದ್ದರು.
ಏಳು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
ಕನ್ನಡಪ್ರಭ ವಾರ್ತೆ, ಕೋಲಾರ, ಮಾ.27
ಕೋಲಾರ ಲೋಕ ಸಭಾ ಮೀಸಲು ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರಗಳನ್ನು ಗುರುವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಪರಿಶೀಲನೆ ಮಾಡಿ ಏಳು ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಿದ್ದಾರೆ.
ಎಸ್.ಪಿ. ಲಕ್ಷ್ಮೀನಾರಾಯಣ, ಆರ್. ಪ್ರತಾಪ್, ಹನುಮಪ್ಪ, ಡಿ. ಮುನೇಶ್, ಎಚ್.ಎನ್. ರಾಮಕೃಷ್ಣಪ್ಪ ಎಲ್ಲರೂ ಪಕ್ಷೇತರರು ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಟಿ. ಗಣೇಶ್ ಮತ್ತು ಸಮಾಜವಾದಿ ಪಕ್ಷದ ಕೆ.ಸಿ. ವಿಜಯಕುಮಾರ್ ನಾಮಪತ್ರಗಳನ್ನು ಅಸಿಂಧುಗೊಳಿಸಿದ್ದಾರೆ. ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರರ ನಾಮಪತ್ರಗಳು ಸ್ವೀಕಾರಗೊಂಡಿವೆ.
ಚುನಾವಣಾ ರಸಪ್ರಶ್ನೆ ಸ್ಪರ್ಧೆಗೆ ಆಹ್ವಾನ
ಕೋಲಾರ: ಜಿಲ್ಲಾ ಸ್ವೀಪ್ ಸಮಿತಿಯಿಂದ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಏ.6 ರಂದು ಬೆಳಿಗ್ಗೆ 11ಗಂಟೆಗೆ ರಸಪ್ರಶ್ನೆ ಸ್ಪರ್ಧೆಯನ್ನು ಕೋಲಾರ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು ಮೂರು ಜನರ ಒಂದು ತಂಡ ಮಾಡಿಕೊಂಡು ತಮ್ಮ ತಂಡದ ಹೆಸರನ್ನು ಜಿಪಂ ಚುನಾವಣಾ ಸ್ವೀಪ್ ವಿಭಾಗದಲ್ಲಿ ಮಾ.28ರಿಂದ ಏ.4ರವರೆಗೆ ನೊಂದಾಯಿಸಿಕೊಳ್ಳಲು ತಿಳಿಸಿದೆ. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ತಂಡಕ್ಕೆ 2 ಸಾವಿರ, ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1 ಸಾವಿರ ರು. ಮತ್ತು ತೃತೀಯ ಬಹುಮಾನ 501 ರು.ಗಳ ಮೊತ್ತದ ಶೈಕ್ಷಣಿಕ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಸ್ವೀಪ್ ಅಧ್ಯಕ್ಷ ಆರ್. ವಿನೋತ್ ಪ್ರಿಯ ತಿಳಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರ ಬಳಕೆ
ಕೋಲಾರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ ಶೇಕಡ ನೂರರಷ್ಟು ಮತದಾನ ಮಾಡಲು ಅನುವು ಮಾಡಿಕೊಡಲು ಎಲ್ಲಾ ಬಸ್ ನಿಲ್ದಾಣಗಳಲ್ಲಿ ಮತದಾನ ಮಾಡುವ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ಇವಿಎಂ ಪ್ರದರ್ಶಿಸಲು ಸೂಕ್ತ ಕ್ರಮಕೈಗೊಳ್ಳಲು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಆರ್. ವಿನೋತ್ ಪ್ರಿಯ ಪತ್ರ ಬರೆದಿದ್ದಾರೆ. ಏ.2 ರಿಂದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಮತಹಾಕುವ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕೆಂದು ಸೂಚಿಸಿದ್ದಾರೆ.