ನಾವು ಬಂದಿದ್ದೇವೆ, ಹುಷಾರ್..!
ಕೋಲಾರದಲ್ಲಿ ಪಥ ಸಂಚಲನ ನಡೆಸಿದ ಕೇರಳ, ಕೇಂದ್ರ ಕೈಗಾರಿಕೆ ಭದ್ರತಾ ದಳ ಪೊಲೀಸರು
ಕೋಲಾರ: ಲೋಕಸಭಾ ಚುನಾವಣೆಗೆ ಇನ್ನು 21 ದಿನ ಬಾಕಿ ಇರುವಾಗಲೇ ಕಾನೂನು ಸುವ್ಯವಸ್ಥೆ ಕಾಪಾಡಲು ಕೋಲಾರಕ್ಕೆ ಬಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ದಳ ಹಾಗೂ ಕೇರಳ ರಾಜ್ಯದ ಮೀಸಲು ಪೊಲೀಸ್ ಪಡೆಯವರು ಗುರುವಾರ ಪಥ ಸಂಚಲನ ನಡೆಸಿದರು.
ಕೋಲಾರ ಕ್ಷೇತ್ರದಲ್ಲಿ ಏ.17 ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರಕ್ಕೆ ಕೋಲಾರ ಜಿಲ್ಲೆಯ ಆರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿವೆ. ಮೀಸಲು ಕ್ಷೇತ್ರವಾದ ಕೋಲಾರದಲ್ಲಿ ಈ ಬಾರಿ ಚುನಾವಣೆ ಮುಕ್ತವಾಗಿ, ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿ ಪ್ರಯತ್ನ ನಡೆಸಿದ್ದಾರೆ, ಈಗಾಗಲೇ ಕೇಂದ್ರದಿಂದ ಬಂದಿರುವ ವೀಕ್ಷಕರು ಜಿಲ್ಲೆಯ ಚುನಾವಣಾ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಜಿಲ್ಲೆಗೆ ಬಂದಿರುವ ಕೈಗಾರಿಕಾ ಭದ್ರತಾ ದಳ ಸಿಬ್ಬಂದಿ ಹಾಗೂ ಕೇರಳ ಪೊಲೀಸರನ್ನು ಆರು ವಿಧಾನಸಭಾ ಕ್ಷೇತ್ರಗಳಿಗೆ ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ, ಹೆದ್ದಾರಿಗಳಲ್ಲಿ ಗಸ್ತು, ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತೆ, ಮತದಾನದ ದಿನ ಅಯಕಟ್ಟಿನ ಪ್ರದೇಶಗಳಲ್ಲಿ ಕೆಲಸ ಮಾಡುವುದಕ್ಕೆ ಇವರನ್ನು ನಿಯೋಜನೆ ಮಾಡಲಾಗಿದೆ.
ಈ ಜಿಲ್ಲೆಯಲ್ಲಿ ಪ್ರಸ್ತುತ ನಿರ್ವಹಿಸುತ್ತಿರುವ ಚುನಾವಣೆಗಾಗಿ 1,563 ಮತದಾನ ಕೇಂದ್ರಗಳನ್ನು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ 478 ಸೇರಿ ಒಟ್ಟು 2,014 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲೆಯಲ್ಲಿ 333 ಅತಿ ಸೂಕ್ಷ್ಮ, 338 ಸೂಕ್ಷ್ಮ ಹಾಗೂ 889 ಸಾಮಾನ್ಯ ಮತಗಟ್ಟೆಗಳಿವೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ಪೈಕಿ ಕ್ರಮವಾಗಿ 34,74 ಅತಿಸೂಕ್ಷ್ಮ, 85, 96 ಸೂಕ್ಷ್ಮ ಹಾಗೂ 11 ಮತ್ತು 78 ಸಾಮಾನ್ಯ ಮತಗಟ್ಟೆಗಳಿವೆ.
ಏ.17ಕ್ಕೂ ಮುಂಚೆಯೇ ಕೈಗಾರಿಕಾ ಭದ್ರತಾ ಸಿಬ್ಬಂದಿ ಹಾಗೂ ಕೇರಳ ರಾಜ್ಯದಿಂದ ಬಂದಿರುವ ಪೊಲೀಸರನ್ನು ಮತಗಟ್ಟೆಗಳ ಪರಿಚಯಕ್ಕಾಗಿ ನಿಯೋಜನೆ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಮತದಾರರನ್ನು ಬೆದರಿಸುವುದು, ಮತದಾರರಿಗೆ ಆಸೆ ಆಮಿಷ ಒಡ್ಡುವವರಿಗೆ, ಮತಗಟ್ಟೆಗಳ ಮೇಲೆ ದಾಳಿ ಮಾಡುವವರನ್ನು ಮಟ್ಟ ಹಾಕಲು ಭದ್ರತಾ ಸಿಬ್ಬಂದಿ ಜಿಲ್ಲಾ ಚುನಾವಣಾ ಸಿಬ್ಬಂದಿಗೆ ನೆರವು ನೀಡಲಿದೆ. ಗುರುವಾರ ನಗರದಲ್ಲಿ ನಡೆದ ಪಥ ಸಂಚಲನದ ನೇತೃತ್ವವನ್ನು ಡಿವೈಎಸ್ಪಿ ಅಶೋಕ್ ಕುಮಾರ್ ವಹಿಸಿದ್ದರು.