ನೀತಿ ಸಂಹಿತೆ ಉಲ್ಲಂಘನೆ ದೂರು; ಬರಿಗೈಲಿ ಹಿಂತಿರುಗಿದ ಅಧಿಕಾರಿಗಳು
ಚಿಂತಾಮಣಿ: ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮವೊಂದರಲ್ಲಿ ಬಾಡೂಟ ಏರ್ಪಡಿಸಿದ್ದ ಬಗ್ಗೆ ನಾಗರಿಕರು ನೀಡಿದ ದೂರಿನ ಮೇರೆಗೆ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬರಿ ಕೈಯಲ್ಲಿ ಹಿಂತಿರುಗಿರುವ ಘಟನೆ ನಗರದ ಹೊರ ವಲಯದ ಮಾಡಿಕೆರೆ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ನಗರದ ಹೊರ ವಲಯದ ಮಾಡಿಕೆರೆ ಕ್ರಾಸ್ ಬಳಿ ಇರುವ ನಿಲಯ ಡೆವಲಪರ್ಸ್ ಖಾಸಗಿ ಸಂಸ್ಥೆ ನಿವೇಶನ ಹಂಚಲು ಗುರುವಾರ ಉದ್ಘಾಟನೆ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಬರುವ ಅತಿಥಿ ಹಾಗೂ ಗ್ರಾಹಕರಿಗೆ ಬಾಡೂಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿ ಸಂಸ್ಥೆಯ ವ್ಯವಸ್ಥಾಪಕರು ಚುನಾವಣೆ ಅಧಿಕಾರಿಗಳಿಂದ ಮುಂಗಡವಾಗಿ ಅನುಮತಿ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ನಿವೇಶನ ಹಂಚಿಕೆ ವಿಷಯವಾಗಿ ಹಿಂದೆ ಮಾಲೀಕರಾಗಿದ್ದ ಮಿತ್ರಭೂಮಿ ವ್ಯವಸ್ಥಾಪಕ ನಿರ್ದೇಶಕ ಆನಂದ್ ರೆಡ್ಡಿ ಮತ್ತು ನಿಲಯ ಡೆವಲಪರ್ಸ್ ನಡುವೆ ಭಿನ್ನಾಭಿಪ್ರಾಯವಿತ್ತು.
ಈ ಎರಡೂ ಗುಂಪುಗಳು ಜಮಾಯಿಸಿ ಪರಸ್ಪರ ಮಾತಿನ ಚಕಮಕಿ ನಡೆಸಿದರು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರವನಗಿಸಿದರು. ರಸ್ತೆ ಮಾರ್ಗವಾಗಿ ಹೋಗಿ ಬರುವ ಪ್ರಯಾಣಿಕರು ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಚುನಾವಣೆ ಕಾರ್ಯಕ್ರಮವೆಂದು ತಪ್ಪಾಗಿ ಭಾವಿಸಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾಧಿಕಾರಿಗಳಾದ ತಾಲೂಕು ದಂಡಾಧಿಕಾರಿ ಜಿ.ವಿ. ಹನುಂತರೆಡ್ಡಿ, ಚುನಾವಣೆ ಜಾಗೃತಿ ದಳ ಅಧಿಕಾರಿಗಳಾದ ಪ್ರದ್ಮನಾಭ, ಕೃಷ್ಣಪ್ಪ, ವೆಂಕಟೇಶಪ್ರಸಾದ್ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ವೀಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರ ಸೆರೆ ಹಿಡಿಯಲಾಯಿತು. ನಂತರ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಮತ್ತು ರಾಜಕೀಯ ಮುಖಂಡರು ಅಥವಾ ಪಕ್ಷದ ಚಿಹ್ನೆ ಇಲ್ಲದಿರುವುದರಿಂದ ಬಂದ ದಾರಿಗೆ ಸುಂಖವಿಲ್ಲವೆಂದು ಹಿಂತಿರುಗಿದರು.