ರಾಜಕೀಯ ಪಕ್ಷಗಳಿಂದ ನೈಸರ್ಗಿಕ ಸಂಪತ್ತು ಲೂಟಿ
ಮದ್ದೂರು: ಕಾರ್ಪೋರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವ ರಾಜಕೀಯ ಪಕ್ಷಗಳು ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ ಹೇಳಿದರು.
ಪಟ್ಟಣದ ಲೀಲಾವತಿ ಬಡಾವಣೆಯ ವಿನಾಯಕ ಕಲ್ಯಾಣ ಮಂಟಪದಲ್ಲಿ ಸಿಐಟಿಯು ಆಯೋಜಿಸಿದ್ದ ದುಡಿಯುವ ಜನರು ಮತ್ತು ಸಂಸತ್ ಚುನಾವಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ವಿದೇಶಿ ಕಾರ್ಪೋರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದೇಶದ ನೈಸರ್ಗಿಕ ಸಂಪತ್ತನ್ನು ಹಾಳು ಮಾಡುತ್ತಿವೆ. ಇದರಿಂದ ಜನರ ಜೀವ ಸೆಲೆಯಾದ ನದಿಗಳ ನೀರನ್ನು ವಿದೇಶಿ ಕಂಪನಿಗಳು ಬಾಟ್ಲಿಂಗ್ ವ್ಯವಸ್ಥೆ ಮೂಲಕ ದೇಶ ವಿದೇಶಗಳಲ್ಲಿ ಮಾರಾಟ ಮಾಡುತ್ತಿವೆ ಎಂದು ಆರೋಪಿಸಿದರು. ನೈಸರ್ಗಿಕ ಸಂಪತ್ತಿನ ಲೂಟಿಯಿಂದಾಗಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಆಹಾರ ಮತ್ತು ನೀರಿನ ಕೊರತೆ ಎದುರಾಗಲಿದೆ. ಸಾರ್ವಜನಿಕರು ದೇಶವನ್ನು ಇಂತಹ ಅಧೋಗತಿಗೆ ತರುತ್ತಿರುವ ರಾಜಕೀಯ ಪಕ್ಷಗಳನ್ನು ಚುನಾವಣೆಗಳಲ್ಲಿ ಸಾರಾಸಗಟಾಗಿ ತಿರಸ್ಕರಿಸುವಂತೆ ಸಲಹೆ ಮಾಡಿದರು.
ಕಾರ್ಮಿಕ ಪರ ನೀತಿ ಇಲ್ಲ: ದೇಶದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕಾರ್ಮಿಕರ ಪರವಾದ ನೀತಿಗಳನ್ನು ರೂಪಿಸುವಲ್ಲಿ ವಿಫಲವಾಗಿವೆ. ಕಾರ್ಮಿಕ ವರ್ಗ ಚುನಾವಣೆಯಲ್ಲಿ ಹಣಕ್ಕಾಗಿ ತಮ್ಮ ಮತಗಳನ್ನು ಮಾರಿಕೊಳ್ಳದೆ ಕಡ್ಡಾಯ ಮತದಾನದ ಮೂಲಕ ಕಾರ್ಮಿಕ ನೀತಿಗಳ ಬಗ್ಗೆ ಒಲವು ಹೊಂದಿರುವ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತನಾಡಿ, ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತನೆ ಮಾಡುತ್ತಿರುವ ರಾಜಕಾರಣಿಗಳು ಸ್ವಾವಲಂಬಿ ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುತ್ತಿರುವ ಹುನ್ನಾರದ ವಿರುದ್ಧ ದ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ತನುಜಾ ಅಧ್ಯಕ್ಷತೆ ವಹಿಸಿದ್ದರು. ಎ.ರಮೇಶ್, ಟಿ.ಯಶವಂತ್, ಸಿ.ಪ್ರದೀಪ್ ಇತರರು ಮಾತನಾಡಿದರು.