ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿಕಲಚೇತನರು
ಕೋಲಾರ: ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ನಗರದ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಂಧ ವಿದ್ಯಾರ್ಥಿಯೊಬ್ಬ ಇತರರ ಸಹಾಯ ಪಡೆದು ಪರೀಕ್ಷೆ ಬರೆದಿದ್ದಾನೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಟ್ಟಹಳ್ಳಿಯವನಾದ ವಿನೋದ್ಕುಮಾರ್ ಎಂಬ ಈ ವಿದ್ಯಾರ್ಥಿ ತಂದೆಯನ್ನು ಕಳೆದುಕೊಂಡಿದ್ದು, ತಾಯಿಯ ಆಸರೆಯಲ್ಲೇ ಗುರಿ ಸಾಧನೆಯ ಛಲದೊಂದಿಗೆ ಇಂದು ಪರೀಕ್ಷೆ ಎದುರಿಸಿದ್ದಾನೆ.
ಬಾಲಕರ ಜೂನಿಯರ್ ಕಾಲೇಜು ಕೇಂದ್ರದಲ್ಲಿ ಈ ವಿದ್ಯಾರ್ಥಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, 9ನೇ ತರಗತಿಯ ವಿದ್ಯಾರ್ಥಿಯೆನ್ನಲಾದ ಶ್ರೀಕಾಂತ್ ಸಹಾಯಕನಾಗಿ ಬರೆಯುತ್ತಿದ್ದಾನೆ.
ಪ್ರಶ್ನೆಯನ್ನು ಶ್ರೀಕಾಂತ್ ಕೇಳುತ್ತಿದ್ದಂತೆ ಅದಕ್ಕೆ ಉತ್ತರವನ್ನು ಹೇಳುತ್ತಾ ಬರೆಸುತ್ತಿದ್ದುದನ್ನು ಕಂಡಾಗ ಅಂಧನಾದರೂ ಸಾಧನೆಯ ಛಲ ಆತನಲ್ಲಿ ಕಂಡು ಬಂತು. ಗಟ್ಟಿಹಳ್ಳಿಯವನಾದ ಈ ವಿದ್ಯಾರ್ಥಿ ಗ್ರಾಮದ ಲೇಟ್ ಶ್ರೀನಿವಾಸರೆಡ್ಡಿ ಮತ್ತು ಮಂಜುಳಾ ದಂಪತಿಗಳ ಮಗನಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಣ್ಣು ಕಳೆದುಕೊಂಡು ಅಂಧನಾಗಿದ್ದರೂ, ಸಾಧನೆಯ ಛಲದೊಂದಿಗೆ ಓದಿಕೊಂಡು ಬಂದಿದ್ದಾನೆ.
ನಗರದ ಬಾಲಕಿಯರ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲೂ ಐವರು ವಿಕಲಚೇತನರು ಸಾಧನೆಯ :ಯಲದೊಂದಿಗೆ ಪರೀಕ್ಷೆ ಬರೆದಿದ್ದಾರೆ. ಪಾರ್ಶುವಾಯುವಿನಿಂದ ಅಂಗವೈಕಲ್ಯಗೊಂಡಿರುವ ದೀಪಾ, ಕಿವಿ ಕೇಳದಿದ್ದರೂ ಸಾಧನೆಯ ಛಲದೊಂದಿಗೆ ಮುಂದಡಿ ಇಟ್ಟಿರುವ ಮುನಿರಾಜು, ಪೂರ್ಣಿಮಾ, ರಾಜೇಂದ್ರಕುಮಾರ್, ವನಿತಾ ಪರೀಕ್ಷೆ ಬರೆಯುತ್ತಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 51 ವಿಕಲಚೇತನರು ಪರೀಕ್ಷೆ ತೆಗೆದುಕೊಂಡಿದ್ದಾರೆ.