ಎಸ್ಸೆಸ್ಸೆಲ್ಸಿ: ಮೂವರು ಡಿಬಾರ್
ಕೋಲಾರ: ಜಿಲ್ಲಾದ್ಯಂತ ಶುಕ್ರವಾರ ಪ್ರಾರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನ ಮೂವರು ನಕಲಿ ಮಾಡಿ ಡಿಬಾರ್ ಆಗಿದ್ದಾರೆ. ಪರೀಕ್ಷೆಗೆ ನೊಂದಾಯಿಸಿದ್ದ 21979 ವಿದ್ಯಾರ್ಥಿಗಳ ಪೈಕಿ 21079 ಮಂದಿ ಹಾಜರಾಗಿ, 893 ಗೈರಾಗಿದ್ದಾರೆ.
ಶುಕ್ರವಾರ ಪ್ರಥಮ ಭಾಷೆಯಾದ ಕನ್ನಡ, ಸಂಸ್ಕೃತ, ಇಂಗ್ಲಿಷ್, ಉರ್ದು, ತೆಲಗು, ತಮಿಳು ವಿಷಯಗಳ ಪರೀಕ್ಷೆ ನಡೆಯಿತು. ಜಿಲ್ಲಾದ್ಯಂತ ಗುಣಾತ್ಮಕ ಪರೀಕ್ಷೆಗೆ ಇಲಾಖೆ ಒತ್ತು ನೀಡಿದ್ದು, ಯಾವುದೇ ಅವ್ಯವಹಾರಗಳು, ನಕಲು ಪ್ರಕರಣಗಳು ನಡೆಯದಂತೆ ಕಟ್ಟೆಚ್ಚರ ವಹಿಸಿತ್ತಾದರೂ ನಕಲಿ ಮಾಡಿ ಮೂವರು ಡಿಬಾರ್ ಆಗಿದ್ದಾರೆಂದು ಡಿಡಿಪಿಐ ಎಸ್.ವಿ. ಪದ್ಮನಾಭ್ ತಿಳಿಸಿದ್ದಾರೆ.
ನಗರದ ಸಮೈಖ್ಯ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ಹಾಗೂ ಬಾಪೂಜಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಖಾಸಗಿ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದು ಡಿಬಾರ್ ಆಗಿದ್ದಾರೆ.