ಕುಡಿವ ನೀರಿಗೆ ಆಗ್ರಹಿಸಿ ರಸ್ತೆಯಲ್ಲಿ ಖಾಲಿ ಬಿಂದಿಗೆಗಳ ಪ್ರತಿಭಟನೆ
ಬಂಗಾರಪೇಟೆ: ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ದಿನ್ನಕೊತ್ತೂರು ಗ್ರಾಮಸ್ಥರು ದಿಢೀರನೆ ರಸ್ತೆಯಲ್ಲಿ ಖಾಲಿ ಬಿಂದಿಗೆಗಳನ್ನು ಇಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆಯಿತು.
ಬೆಂಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿನ್ನಕೊತ್ತೂರು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿ ತಾಂಡವವಾಡುತ್ತಿದ್ದರೂ ಪಂಚಾಯ್ತಿ ಅಧಿಕಾರಿಗಳಾಗಲಿ ಅಥವಾ ತಾಪಂ ಕಚೇರಿ ಅಧಿಕಾರಿಗಳಾಗಲಿ ಗಮನಹರಿಸದೆ ನಿರ್ಲಕ್ಷ್ಯ ತಾಳಿರುವುದರಿಂದ ಗ್ರಾಮದಲ್ಲಿ ಸಮಸ್ಯೆ ಬಿಗಡಾಯಿಸುವಂತಾಗಿದೆ. ಗ್ರಾಮದಲ್ಲಿ ಹೊಸ ಬೋರ್ ಕೊರೆಸಲಾಗಿದೆ ಆದರೆ ಇದುವರೆಗೂ ಅದಕ್ಕೆ ಪಂಪು ಮೋಟರ್ ಅಳವಡಿಸಿಲ್ಲ, ಮೊದಲೇ ಬರಗಾಲದಿಂದ ತತ್ತರಿಸಿರುವ ಗ್ರಾಮಸ್ಥರು ಅಧಿಕಾರಿಗಳು ಕುಡಿಯುವ ನೀರಿಗೆ ಸ್ಪಂದಿಸದೆ ನಿರ್ಲಕ್ಷ್ಯ ಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಸಮಸ್ಯೆ ನೀಗಿಸಬೇಕು ಅದುವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ದಿಢೀರನೆ ಖಾಲಿ ಬಿಂದಿಗೆಗಳನ್ನು ರಸ್ತೆಯಲ್ಲಿಟ್ಟು ರಸ್ತೆತಡೆ ಮಾಡಿ ಪ್ರತಿಭಟನೆ ಮಾಡಿದರಿಂದ ಈ ಮಾರ್ಗದ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಇದರ ನಡುವೆ ವಿದ್ಯುತ್ ಸಮಸ್ಯೆ ಬೇರೆ ಇದ್ದು ಹಗಲು ರಾತ್ರಿ ಎನ್ನದೆ ವಿದ್ಯುತ್ ಕಣ್ಣಾಮುಚ್ಚಾಲೆಯಾಟವಾಡುತ್ತಿರುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ ಎಂದು ದೂರಿದರು. ಗ್ರಾಮಸ್ಥರು ಪರ್ತಿಭಟನೆ ಮಾಡುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಮಾಡಿಲ್ಲ.ನಂತರ ಗ್ರಾಮಸ್ಥರೇ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು. ಪ್ರತಿಭಟನೆ ನೇತೃತ್ವವನ್ನು ತಾಪಂ ಸದಸ್ಯ ಶಿವಣ್ಣ ವಹಿಸಿದ್ದರು.