ಚಿಕ್ಕಬಳ್ಳಾಪುರ ಜಿಪಂ ಕಚೇರಿ ಮೇಲೆ ರಾತ್ರಿ 'ಲೋಕಾ' ದಾಳಿ: 6 ಜನರ ಬಂಧನ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಪಂ ಕಾರ್ಯಪಾಲಕ ಎಂಜಿನಿಯರ್ ಸುಂದರರಾಜ್ ಸೇರಿದಂತೆ 5 ಅಧಿಕಾರಿಗಳ ವಿರುದ್ಧ ಗುರುವಾರ ರಾತ್ರಿ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿ, ಅವರಿಂದ 4 ಲಕ್ಷಕ್ಕಿಂತ ಹೆಚ್ಚಿನ ಅನಧಿಕೃತ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಪಂ ಕಾರ್ಯಪಾಲಕ ಅಭಿಯಂತರ ಸುಂದರರಾಜ್(48), ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿ(43), ಲೆಕ್ಕಾಧಿಕಾರಿ ಬಾಬಾಜಾನ್ (38) ಮತ್ತು ಗುಮಾಸ್ತಗಳಾದ ಮಂಜುನಾಥ್, ನ್ಯೂಸದ್ ಅಹಮದ್, ಶಿವಲಿಂಗೇಗೌಡ ಅವರು ಬಂಧಿತ ಅಧಿಕಾರಿಗಳು. ಹಣಕಾಸು ವರ್ಷಾಂತ್ಯ ದಿನದಂದ ವಿವಿಧ ಕಾಮಗಾರಿಗಳ ಬಿಲ್ಗಳನ್ನು ಮಾಡಿಕೊಡುವ ಸಂಬಂಧ ಹಣವನ್ನು ದುರ್ಬಳಿಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳು ರಾತ್ರಿ ಕೂಡಾ ಕೆಲಸ ಮಾಡುತ್ತಿದ್ದಾರೆ ಎಂದು ಬಂದ ದೂರಿನ ಹಿನ್ನೆಲೆಯಲ್ಲಿ ನಗರದ ಬಿ.ಬಿ. ರಸ್ತೆಯಲ್ಲಿರುವ ಜಿಪಂ ತಾಂತ್ರಿಕ ವಿಭಾಗದ ಕಚೇರಿಯ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿದರು. ಕಚೇರಿಯಲ್ಲಿ ಕಡತಗಳನ್ನು ಜಾಲಾಡಿದರು. ಆದರೆ, ಕಚೇರಿಯೊಳಗೆ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಬಹುತೇಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ದಾಖಲೆಗಳ ಪರಿಶೀಲನೆ ರಾತ್ರಿ ಸುಮಾರು 11 ಗಂಟೆಯವರೆಗೂ ನಡೆಯಿತು. ಈ ಸಂದರ್ಭದಲ್ಲಿದಾಖಲೆಗಳಿಲ್ಲದ 4,24,820 ಸಿಕ್ಕಿದೆ. ಅಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು, ಅವರನ್ನು ಜಿಲ್ಲಾ ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರನ್ನು ಏ.10ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಜಿಲ್ಲಾ ಲೋಕಾಯುಕ್ತ ಎಸ್.ಪಿ ಚಂದ್ರಶೇಖರಯ್ಯ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು.