14 ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ
ಶಿಡ್ಲಘಟ್ಟ: ಎಸ್ಎಸ್ಎಲ್ಸಿ. ಪರೀಕ್ಷೆಗಳು ಪ್ರಾರಂಭವಾಗಿದ್ದು, ಪಟ್ಟಣದ 6 ಸೇರಿದಂತೆ ತಾಲೂಕಿನಾದ್ಯಂತ 14 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಹತ್ತು ತಿಂಗಳಿಂದ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆ ಬರೆದರು. ಪಟ್ಟಣದ ಆಶಾಕಿರಣ ಅಂಧ ಮಕ್ಕಳ ಶಾಲೆಯ 9 ವಿದ್ಯಾರ್ಥಿಗಳು ಸೇರಿ 2,694(ಪುನಾವರ್ತಿತ 63 ಸೇರಿ) ವಿದ್ಯಾರ್ಥಿಗಳ ಪರೀಕ್ಷೆ ಬರೆಯಯುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪರೀಕ್ಷೆ ವೇಳೆ ನಕಲು ಗಮನ ಹರಿಸಲು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು ಸೇರಿದಂತೆ ಇಬ್ಬರು ಸಿಟ್ಟಿಂಗ್ ಸ್ಕ್ವಾಡ್ಗಳನ್ನು ನಿಯೋಜಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಇಒ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಂಚಾರಿ ಜಾಗೃತದಳ ರಚಿಸಲಾಗಿದೆ ಎಂದರು.
ನೂತನ ಕೊಳವೆಬಾವಿ ಕೊರೆಸಲು ಚಾಲನೆ
ಶಿಡ್ಲಘಟ್ಟ: ಕಳೆದ ತಿಂಗಳು ಇದ್ಲೂಡು ಗ್ರಾಮಸ್ಥರು ಅಡ್ಡಿಪಡಿಸಿದ ಕಾರಣದಿಂದ ಸ್ಥಗಿತಗೊಂಡಿದ್ದ ಕೊಳವೆಬಾವಿ ಕೊರೆಸುವ ಕಾಮಗಾರಿಗೆ ಶನಿವಾರ ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್ ಚಾಲನೆ ನೀಡಿದರು. ಕೊಳವೆಬಾವಿಗಳನ್ನು ಕೊರೆಸಲು ಮುಂದಾದಾಗ ತಾಲೂಕಿನ ಇದ್ಲೂಡು ಗ್ರಾಮಸ್ಥರು ಕೆರೆಯಲ್ಲಿ ಹಾಕದಂತೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಪುರಸಭೆ ಆಡಳಿತಾಧಿಕಾರಿಯಾಗಿದ್ದ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳಿಗೆ ಪುರಸಭೆಯ ಮುಖ್ಯಾಧಿಕಾರಿ ಸಲ್ಲಿಸಿದ್ದ ದೂರಿನ ಮೇರೆಗೆ ತಹಸೀಲ್ದಾರರಿಗೆ ಸೂಚನೆ ನೀಡಿದ ಉಪವಿಭಾಗಾಧಿಕಾರಿ ಕೆ.ಟಿ. ಶಾಂತಲಾ ಅವರು ಕೂಡಲೇ ಇದ್ಲೂಡು ಕೆರೆಯನ್ನು ಸರ್ವೇ ಮಾಡಿಸಿ ಸರ್ಕಾರಿ ಜಾಗದಲ್ಲಿ ಕೊಳವೆಬಾವಿ ಕೊರೆಸುವಂತೆ ಸೂಚನೆ ನೀಡಿದ್ದರಿಂದ ಶನಿವಾರ ಚಾಲನೆ ನೀಡಲಾಯಿತು.