19 ಮಂದಿ ಅಂತಿಮ ಕಣದಲ್ಲಿ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಂತಿಮವಾಗಿ 19 ಮಂದಿ ಕಣದಲ್ಲಿ ಉಳಿದಿದ್ದು, ವಿವಿಧ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಅದ್ಧೂರಿ ಪ್ರಚಾರದಲ್ಲಿ ನಿರತರಾಗಿದ್ದರೆ, ಜಿಲ್ಲಾ ಚುನಾವಣಾಧಿಕಾರಿಗಳು ಸೇರಿ ವಿವಿಧ ಹಂತದ ಅಧಿಕಾರಿಗಳು ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಮೂರು ಜಿಲ್ಲೆಗಳ ಮಿಶ್ರಣವಾಗಿದ್ದು, ಮೂವರು ಜಿಲ್ಲಾಧಿಕಾರಿಗಳ ಹೊಣೆಗಾರಿಕೆಯಲ್ಲಿ ಚುನಾವಣಾ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕ್ಷೇತ್ರ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ಯಲಹಂಕ ಸೇರಿ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಲೋಕಸಭಾ ಕ್ಷೇತ್ರದಲ್ಲಿ 15,99,394 ಮತದಾರರಿದ್ದರು.
ಮತದಾರರ ವಿವರ: ಇದರಲ್ಲಿ 8,14,277 ಪುರುಷರು ಮತ್ತು 7,85,050 ಮಹಿಳೆಯರು ಮತ್ತು 67 ಇತರೆ ಮತದಾರರು ಇದ್ದರು. 46,729 ಮಂದಿ ಹೊಸ ಮತದಾರರಲ್ಲಿ 1,668 ಮತದಾರರನ್ನು ಕೈ ಬಿಟ್ಟಿದ್ದು, ಉಳಿದಂತೆ 45,061 ಮತದಾರರು ಸೇರ್ಪಡೆಯಾಗಿದ್ದಾರೆ. ಇದೀಗ ಒಟ್ಟಾರೆ 16,44,455 ಮತದಾರರಿದ್ದಾರೆ. ಗೌರಿಬಿದನೂರಿನಲ್ಲಿ 253 ಮತಗಟ್ಟೆಗಳು ಮತ್ತು 1,93,958 ಮತದಾರರು, ಬಾಗೇಪಲ್ಲಿಯಲ್ಲಿ 251 ಮತಗಟ್ಟೆಗಳು ಮತ್ತು 1,81,818, ಚಿಕ್ಕಬಳ್ಳಾಫುರದಲ್ಲಿ 237 ಮತಗಟ್ಟೆಗಳು ಮತ್ತು 1.84,206 ಮತದಾರರು, ಯಲಹಂಕದಲ್ಲಿ 346 ಮತಗಟ್ಟೆಗಳು ಮತ್ತು 3,23,859 ಮತದಾರರು, ಹೊಸಕೋಟೆಯಲ್ಲಿ 265 ಮತಗಟ್ಟೆಗಳು 1,95,186 ಮತದಾರರು, ದೇವನಹಳ್ಳಿಯಲ್ಲಿ 274 ಮತಗಟ್ಟೆಗಳು ಮತ್ತು 1,91.417 ಮತದಾರರು, ದೊಡ್ಡಬಳ್ಳಾಪುರದಲ್ಲಿ 250 ಮತಗಟ್ಟೆಗಳು ಮತ್ತು 1,93,274 ಮತದಾರರು, ನೆಲಮಂಗಲದಲ್ಲಿ 243 ಮತಗಟ್ಟೆಗಳು ಮತ್ತು 1,92,824 ಮತದಾರರಿದ್ದಾರೆ. ಯಲಹಂಕ ಅತಿ ಹೆಚ್ಚು ಮತದಾರರನ್ನು ಮತ್ತು ಬಾಗೇಪಲ್ಲಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರಗಳಾಗಿವೆ. ಒಟ್ಟಾರೆ 2,119 ಮತಗಟ್ಟೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಕ್ಷೇತ್ರದ 1,596 ವಿವಿಧ ಪ್ರದೇಶಗಳ ವ್ಯಾಪ್ತಿಯ ಒಟ್ಟು ಮತಗಟ್ಟೆಗಳಲ್ಲಿ ನಗರದಲ್ಲಿ 436 ಮತ್ತು ಗ್ರಾಮೀಣ ಭಾಗದಲ್ಲಿ 1,683 ಮತಗಟ್ಟೆಗಳು ಇರಲಿವೆ.
ಅಧಿಕಾರಿಗಳ ತಂಡ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಕಟ್ಟೆಚ್ಚರ ವಹಿಸಿಲು ಉಸ್ತುವಾರಿ ಅಧಿಕಾರಿಗಳ ತಂಡ ನೇಮಿಸಿದ್ದು ಕ್ಷೇತ್ರದಾದ್ಯಂತ 44 ಜಾಗೃತ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. 138 ಸೆಕ್ಟರ್ ಅಫೀಸರ್ಗಳು, ಚುನಾವಣೆಗೆ ಸಂಬಂಧಿಸಿ ಅಂಕಿ ಅಂಶಗಳ ಮಾಹಿತಿ ಸಂಗ್ರಹಣಾ ತಂಡ 34, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ವಿಡಿಯೋ ಚಿತ್ರೀಕರಣ ತಂಡ ಮತ್ತು ಅಭ್ಯರ್ಥಿಗಳ ಖರ್ಚಿನ ನಿಗಾ ವಹಿಸಲು ತಲಾ 16 ಮಂದಿ ಸಹಾಯಕ ವೀಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.
ವಾಹನಗಳ ವಿವರ: ಕಾರ್ಯ ನಿರ್ವಹಣೆಗಾಗಿ 2 ಬಸ್ಸು, 16 ಮಿನಿ ಬಸ್ ಮತ್ತು 210 ಜೀಪುಗಳು, 5 ಟ್ರಕ್ಗಳು ಮತ್ತು 6 ಸಾವಿರ ಸಿಬ್ಬಂದಿ ಬೇಕಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದು, 2,119 ಮತಗಟ್ಟೆಗಳಿಗೆ ತಲಾ 2 ಮತ ವಿದ್ಯುನ್ಮಾನ ಯಂತ್ರಗಳು, ತರಬೇತಿಗೂ ಸೇರಿದಂತೆ ಒಟ್ಟು 4,662 ಯಂತ್ರಗಳ ಅವಶ್ಯವಿದೆ ಎಂದು ಲೆಕ್ಕ ಹಾಕಲಾಗಿದೆ.
ಈವರೆಗೆ ದಾಖಲಾದ ಪ್ರಕರಣಗಳು: ಪ್ರಮುಖವಾಗಿ ನೀತಿ ಸಂಹಿತೆಗೆ ವಿರುದ್ಧವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಆಮಿಷಗಳನ್ನೊಡ್ಡುವ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ 29 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 24 ಪ್ರಕರಣಗಳು ಎಫ್ಐಆರ್ ಆಗಿದ್ದು ಈವರೆಗೂ ರು. 1,33,946 ಮೌಲ್ಯದ 2,626 ಲೀಟರ್ ಅಕ್ರಮ ಮದ್ಯ, ರು. 23,30,000 ನಗದು, ರು. 26,43,750 ಮೌಲ್ಯದ 1,500 ರೇಷ್ಮೆ ಸೀರೆಗಳು ಮತ್ತು ಇತರೆ ಪ್ರಕರಣಕ್ಕೆ ಸಂಬಂಧಿಸಿ ರು. 1,50,000 ನಗದು, 3 ದ್ವಿಚಕ್ರ ವಾಹನಗಳು ಮತ್ತು ನಾಲ್ಕುಚಕ್ರದ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೌರಿಬಿದನೂರಿನಲ್ಲಿ 10 ಲೀಟರ್, ಬಾಗೇಪಲ್ಲಿಯಲ್ಲಿ 2,450 ಲೀಟರ್, ಚಿಕ್ಕಬಳ್ಳಾಪುರದಲ್ಲಿ 97.87 ಲೀಟರ್ ಮದ್ಯ, ದೇವನಹಳ್ಳಿಯಲ್ಲಿ ರು. 4,32,000 ಮೌಲ್ಯದ ಸೀರೆಗಳು ಮತ್ತು ಚಿಕ್ಕಬಳ್ಳಾಪುರದಲ್ಲಿ ರು. 22,11,750 ಮೌಲ್ಯದ 1,500 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲದಲ್ಲಿ ರು. 8,80,000 ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳನ್ನು ತೋರಿಸಿದ ಹಿನ್ನೆಲೆಯಲ್ಲಿ ಮಾಲೀಕರಿಗೆ ಹಿಂದಿರುಗಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಕ್ಷೇತ್ರದಲ್ಲಿ 19 ದೂರು ಸ್ವೀಕರಿಸಿ ಇತ್ಯರ್ಥಪಡಿಸಲಾಗಿದೆ.ಅಧಿಕಾರಿಗಳ ವಿರುದ್ಧ 13, ರಾಜಕೀಯ ಪಕ್ಷಗಳ ವಿರುದ್ಧ 5 ದೂರುಗಳು ಬಂದಿವೆ.