ತೆಲಗು ಚಿತ್ರ ಬಿಡುಗಡೆಗೆ ಕುರಿಗಳ ಬಲಿ: ಖಂಡನೆ
ಮಾಲೂರು: ಕೋಲಾರದ ಪಲ್ಲವಿ ಚಿತ್ರ ಮಂದಿರದಲ್ಲಿ ತೆಲಗು ಚಿತ್ರವೂಂದರ ಬಿಡುಗಡೆಯ ದಿನ ಕುರಿಗಳನ್ನು ಬಲಿಕೊಟ್ಟಿರುವುದಕ್ಕೆ ಸ್ಥಳೀಯ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಖಂಡಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕನ್ನಡ ಹರೀಶ್, ಮೂಕಪ್ರಾಣಿಗಳನ್ನು ಬಲಿ ನೀಡುವ ಪದ್ಧತಿಗೆ ನಿಷೇಧವಾಗಿರುವಾಗ ಅಂಧಾಭಿಮಾನ ಮೆರೆದಿರುವುದಕ್ಕೆ ವೇದಿಕೆ ಖಂಡಿಸುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಖೇದಕರ ಎಂದರು. ಕೋಲಾರ ಜಿಲ್ಲಾ ಕೇಂದ್ರವಾಗಿದ್ದು, ಅಲ್ಲಿರುವ ಕನ್ನಡ ಸಂಘಟನೆಗಳು, ಪ್ರಾಣಿ ದಯಾ ಸಂಘದವರು ಕಣ್ಣು ಮುಚ್ಚಿಕುಳಿತಿರುವುದು ಖಂಡನೀಯ, ಪರಭಾಷ ಚಿತ್ರಗಳನ್ನು ಬಿಡುಗಡೆಯಾದ ನಾಲ್ಕು ವಾರಗಳ ನಂತರ ರಾಜ್ಯದಲ್ಲಿ ಬಿಡುಗಡೆ ಮಾಡಬೇಕೆಂಬ ಆದೇಶ ಪ್ರಕರಣದಲ್ಲಿ ಧಿಕ್ಕರಿಸಲಾಗಿದೆ ಎಂದರು. ಕುರಿ ಬಲಿ ವಿಷಯದಲ್ಲಿ ಈ ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೆಲುಗಿನ ಅಂಧಾಭಿಮಾನಿಗಳು ಹಾಗೂ ಕರಿಬಲಿಗೆ ಅವಕಾಶ ಮಾಡಿಕೊಟ್ಟ ಚಿತ್ರ ಮಂದಿರದ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.
ಮುನಿಯಪ್ಪರನ್ನು ಗೆಲ್ಲಿಸಲು ಶಾಸಕರ ಮನವಿ
ಬಂಗಾರಪೇಟೆ: ಆರು ಬಾರಿ ಗೆದ್ದಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಜಿಲ್ಲೆಗಾಗಿ ನೀಡಿರುವ ಕೊಡುಗೆ ಗುರುತಿಸಿ ಮತ ನೀಡಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೋರಿದರು.
ತಾಲೂಕಿನ ಬಲಮಂದೆ ಮತ್ತು ಗುಲ್ಲಹಳ್ಳಿ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಪರ ಮತಯಾಚಿಸಿ, ರಾಜ್ಯದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ ಅದೆಲ್ಲಾ ಸುಳ್ಳು, ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಗಮನಿಸಿ ಮತ ನೀಡುವರೆಂಬ ನಂಬಿಕೆ ನನಗಿದೆ, ಸುಳ್ಳು ಆಶ್ವಾಸನೆಗಳಿಗೆ ಮರುಳಾಗದೆ ಕಾಂಗ್ರೆಸ್ ಅಧಿಕಾರಕ್ಕೆ ತಂದರೆ ದೇಶ ಮುಂಚೂನಿಯಲ್ಲಿರಲು ಸಾಧ್ಯ ಎಂದು ಹೇಳಿದರು. ಈ ವೇಳೆ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಹೊಸರಾಯಪ್ಪ, ಪಂ.ಅಧ್ಯಕ್ಷ ಚಲಪತಿ, ವೆಂಕಟೇಶ್, ತಿಮ್ಮರಾಯಪ್ಪ ಇದ್ದರು.