ನಟ ಪವನ್, ನಾಗಾರ್ಜುನ್ ಬಿಜೆಪಿ ಪರ ಪ್ರಚಾರ?
ಕೋಲಾರ: ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಪರವಾಗಿ ಪ್ರಚಾರಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟರಾದ ಅಕ್ಕನೇನಿ ನಾಗಾರ್ಜುನ್ ಹಾಗೂ ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರನ್ನು ಕರೆಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಚುನಾವಣಾ ಕಣದಲ್ಲಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಜೆಡಿಎಸ್ನಿಂದ ಕೆ. ಕೇಶವ ಇರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ ತಾರಾ ಬಲ ಬಳಸಿ ಮತದಾರರನ್ನು ಸೆಳೆಯಲು ಮುಖಂಡರುಲೆಕ್ಕಾಚಾರ ಹಾಕಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಸೇರಿದ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಹಳ್ಳಿಗಳು ಆಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಇಲ್ಲಿನ ತೆಲುಗು ಮಾತನಾಡುವ ಜನರನ್ನು ಸೆಳೆಯುವುದು ಮುಖಂಡರ ಉದ್ದೇಶವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಮೋದಿ ಅಲೆಯಿಂದಾಗಿ ಯುವಕ ಮತದಾರರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಜೊತೆಗೆ ಮೋದಿ ಪ್ರಧಾನಿ ಆಗಲು ಬೆಂಬಲ ಸೂಚಿಸಿರುವ ಆಂಧ್ರ ಪ್ರದೇಶದ ಜನಪ್ರಿಯ ನಟರಾದ ನಾಗಾರ್ಜುನ್ ಮತ್ತು ಪವನ್ ಕಲ್ಯಾಣ್ ಇನ್ನಿತರರು ಬಂದು ಪ್ರಚಾರ ಮಾಡಿದಲ್ಲಿ ಲಾಭವಾಗುತ್ತದೆ ಎಂಬ ಕಾರಣಕ್ಕೆ ಈ ಇಬ್ಬರು ನಟರನ್ನು ಆಹ್ವಾನಿಸಲು ಪ್ರಯತ್ನ ನಡೆಯುತ್ತಿದೆ ಎಂದು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಜಾತಿ ಪತ್ರ ವಿಚಾರದಲ್ಲಿ ಸದ್ಯಕ್ಕೆ ಬಚಾವ್ ಆಗಿರಬಹುದು. ಆದರೆ, ಮುಂದೊಂದು ದಿನ ಕಾನೂನಿಗೆ ತಲೆ ಬಾಗಲೇಬೇಕಾಗುತ್ತದೆ. ಹಣ ಬಲ ಇದೆ ಎಂದು ಕೇಶವ ಅವರನ್ನು ಜೆಡಿಎಸ್ ನಾಯಕರು ಕಣಕ್ಕೆ ಇಳಿಸಿದ್ದಾರೆ. ಆದರೆ, ಮತದಾರರು ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ, ಕಾಂಗ್ರೆಸ್ ಅಭ್ಯರ್ಥಿಯ ಮೇಲಿನ ಅಸಮಾಧಾನ, ಜೆಡಿಎಸ್ ಅವಕಾಶವಾದಿ ರಾಜಕಾರಣ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗೆ ವರದಾನವಾಗಲಿದೆ. ಯುಗಾದಿ ಹಬ್ಬದ ನಂತರ ನಮ್ಮ ಪಕ್ಷದ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.