ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ
ಚಿಕ್ಕಬಳ್ಳಾಪುರ: ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಕೆ ಮೇ 16 ರಂದು ನಗರದ ಹೊರ ವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಈ ಹಿಂದೆ ಎಸ್ ಜೆಸಿಐಟಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿತ್ತು. ಆದರೆ, ಈ ಬಾರಿ ಸ್ಥಳ ಬದಲಾವಣೆಯಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್, ಮತ ಎಣಿಕೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜನ್ನು ಆಯ್ಕೆ ಮಾಡಿದ್ದು, ವ್ಯವಸ್ಥೆ, ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲೆಗೆ ಅಸ್ಸಾಂ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ಇಮಾದುಲ್ಹಕ್ ಚುನಾವಣಾ ವೀಕ್ಷಕರಾಗಿ ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ವಿಶಾಖಪಟ್ಟಣಂನ ಆದಾಯ ತೆರಿಗೆ ಇಲಾಖೆಯ ಆಯುಕ್ತ ಕೆ.ವಿ. ಚಾರ್ಯ ಮತ್ತು ಹೈದರಾಬಾದ್ನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ ಮುರಳಿಮೋಹನ ನೇಮಕಗೊಂಡಿದ್ದಾರೆ ಎಂದರು. ಈ ಬಾರಿ ಅತಿ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳ ಮೇಲೆ ವಿಶೇಷವಾಗಿ ನಿಗಾಯಿಡಲಾಗುತ್ತದೆ.