ಪೊಲೀಸ್ ಧ್ವಜ ದಿನಾಚರಣೆ ಇಂದು
ಕೋಲಾರ: ನಗರದ ಕವಾಯತ್ತು ಮೈದಾನದಲ್ಲಿ ಏ.2ರಂದು ಬುಧವಾರ ಬೆಳಿಗ್ಗೆ 8 ಗಂಟೆಗೆ ಪೊಲೀಸ್ ಧ್ವಜ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪೊಲೀಸ್ ಉಪ ನಿರೀಕ್ಷಕ ವಿ.ಎಂ. ಸೊಣ್ಣಪ್ಪ ಧ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕರಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಭಾಗವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಧೀಕ್ಷಕ ಅಜಯ್ ಹಿಲೋರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಐ. ಜಮೀಲ್ ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗಬೇಕೆಂದು ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಲ್ಲಿನ ಮೆದೆಗೆ ಬೆಂಕಿ; ಅಪಾರ ನಷ್ಟ
ಟೇಕಲ್: ಹುಣಸಿಕೋಟೆ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಗ್ರಾಪಂ ಮಾಜಿ ಅಧ್ಯಕ್ಷ ಆರ್. ವೆಂಕಟೇಶಗೌಡರಿಗೆ ಸೇರಿದ ಸುಮಾರು ರು. 2.70ಲಕ್ಷ ಬೆಲೆ ಬಾಳುವ ಹುಲ್ಲಿನ ಮೆದೆಗೆ ಬೆಂಕಿ ಬಿದ್ದು, ಸಂಪೂರ್ಣ ಭಸ್ಮವಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರು ಬಹಳಷ್ಟು ಪ್ರಯತ್ನ ಪಟ್ಟರು ಪ್ರಯೋಜನ ಇಲ್ಲವಾಗಿದೆ. ದುಷ್ಕರ್ಮಿಗಳು ಈ ಕೃತ್ಯ ಎಸಗಿರಬೇಕು ಎಂದು ಅನುಮಾನಿಸಲಾಗಿದ್ದು, ಟೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕೋಲಾರ: ತಾಲೂಕಿನ ಅರಾಭಿಕೊತ್ತೂರು ಬಳಿಯ ಕೆಂದಟ್ಟಿ ಕ್ವಾರಿಯ ನೀರಿನ ಕೊಳದಲ್ಲಿ ಮುಳಗಿ ಬೆಂಗಳೂರಿನ ಯುವಕನೊಬ್ಬ ಮೃತಪಟ್ಟಿದ್ದಾನೆ. ಕೇದಾರ್(20) ಎಂಬುವನೇ ಮೃತ ಯುವಕನಾಗಿದ್ದಾನೆ. ಕೇದಾರ್ ಬೆಂಗಳೂರಿನ ಗಿರಿನಗರದ ನಿವಾಸಿಯಾಗಿದ್ದು ಎಂಜನಿಯರಿಂಗ್ ಓದುತ್ತಿದ್ದ. ತನ್ನ ಕಾಲೇಜಿನ ಐವರು ಸಹಪಾಠಿಗಳೊಂದಿಗೆ ಈಜಲು ಬಂದು ನೀರು ಪಾಲಾಗಿದ್ದಾನೆ. ಶವ ಶೋಧನೆ ಕಾರ್ಯ ನಡೆಯುತ್ತಿದೆ, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.