ಜೆಡಿಎಸ್ ತೊರೆದಿರುವುದರಿಂದ ನಷ್ಟವಿಲ್ಲ
ಗೌರಿಬಿದನೂರು: ಮಾಜಿ ಶಾಸಕಿ ಹಾಗೂ ಜೆಡಿಎಸ್ ಮುಖಂಡರಾಗಿದ್ದ ಜ್ಯೋತಿರೆಡ್ಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದು, ಅವರ ದೃಢ ನಿರ್ಧಾರದಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದರು.
ಜ್ಯೋತಿರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾದ ನಂತರ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜ್ಯೋತಿರೆಡ್ಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ದೇವಗೌಡರು, ಕುಮಾರಸ್ವಾಮಿ ಅವರು ತೀವ್ರ ಪ್ರಯತ್ನ ಮಾಡಿದರು, ಜಿಲ್ಲಾಧ್ಯಕ್ಷನಾಗಿ ನಾನೂ ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಆದರೆ ಯಾವುದಕ್ಕೂ ಒಪ್ಪದ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ, ಅವರು ಜೆಡಿಎಸ್ ತೊರೆದಿರುವುದರಿಂದ ಪಕ್ಷಕ್ಕೆ ಹೊಡೆತ ಇಲ್ಲ. ಅವರ ಹಿಂದೆ ಕಾರ್ಯಕರ್ತರು ಯಾರೂ ಹೋಗಿಲ್ಲ ಎಂದರು.
ಮುಖಂಡ ಜೈಪಾಲರೆಡ್ಡಿ ಮಾತನಾಡಿ, ನಾನು ಈಗ ಜೆಡಿಎಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು. ತಾಲೂಕು ಅಧ್ಯಕ್ಷ ಶಿವರಾಮರೆಡ್ಡಿ ಮಾತನಾಡಿ, ಜ್ಯೋತಿರೆಡ್ಡಿ ಅವರ ವಿಚಾರ ಬಿಟ್ಟು ಪಕ್ಷದ ಮುಂದಿನ ಬೆಳವಣಿಗೆ ಬಗ್ಗೆ ಚಿಂತಿಸೋಣ ಎಂದರು. ನಗರ ಘಟಕದ ಅಧ್ಯಕ್ಷ ಎಸ್.ಎಚ್. ಲಕ್ಷ್ಮೀನಾರಾಯಣ, ವಕ್ತಾರ ಹೊಸೂರು ಹರಿ, ಎ.ಎನ್. ವೇಣುಗೋಪಾಲ್, ಗೋಪಾಲ್, ವಿವೇಕಾನಂದರೆಡ್ಡಿ ಇದ್ದರು.