ಜಾತಿ, ಧರ್ಮಗಳ ಹೆಸರಲ್ಲಿ ಕಾರ್ಮಿಕರ ವಿಭಜನೆ
ಬಾಗೇಪಲ್ಲಿ: ಜಾತಿ ಧರ್ಮಗಳ ಹೆಸರಿನಲ್ಲಿ ಕಾರ್ಮಿಕರನ್ನು ವಿಭಜಿಸಿ ಕಾರ್ಮಿಕರ ಶ್ರಮದ ಪ್ರತಿಫಲವನ್ನು ಕೆಲವು ಬಂಡವಾಳ ಶಾಹಿಗಳು ದೋಚಿಕೊಳ್ಳುತ್ತಿವೆ ಎಂದು ಮಾಜಿ ಶಾಸಕ, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ತಾಲೂಕು ಹಮಾಲಿ ಕಾರ್ಮಿಕರ ಫೆಡರೇಷನ್, ಸಿಐಟಿಯು ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆಗೆ ತರುವ ಮೂಲಕ ಕಾರ್ಮಿಕರ ಸಮಸ್ಯೆಗಳು ಇಂದಿಗೂ ಜೀವಂತವಾಗಿರಲು ಕಾರಣವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕಾಗೋದಲ್ಲಿ ಅಮೇರಿಕಾ ಸರ್ಕಾರದ ವಿರುದ್ಧ ಕಾರ್ಮಿಕರು ಹೋರಾಟ ನಡೆಸಿದ ಸಂದರ್ಭದಲ್ಲಿ ನಡೆಸಿದ ಗೋಲಿಬಾರ್ನಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು ಪೊಲೀಸರ ಗುಂಡಿಗೆ ಬಲಿಯಾದರು. ಆಗ ಮೃತರ ರಕ್ತದ ಬಟ್ಟೆಯನ್ನು ಮೇಲೆ ಎತ್ತಿದ ಸೂಚನೆಯೇ ಕೆಂಬಾವುಟ ಆಗಿದೆ. ಕೆಂಬಾವುಟ ಎಂದರೆ ತ್ಯಾಗ, ಬಲಿದಾನಗಳ ಸಂಕೇತ ಆಗಿದೆ ಎಂದ ಅವರು, ಸರ್ಕಾರಗಳು ಬದಲಾವಣೆ ಆದ ಮಾತ್ರಕ್ಕೆ ಕಾರ್ಮಿಕರ ಸಮಸ್ಯೆಗಳು ಬೆಳವಣಿಗೆಗಳು ಮಾತ್ರ ಬದಲಾಗಲ್ಲ. ಆದರೆ ರೀತಿ ನೀತಿ ಹಾಗೂ ವಿಧಾನಗಳು ಬದಲಾಗಬೇಕು. ಇಡೀ ವಿಶ್ವದಲ್ಲಿ ಯಾವುದೇ ಸರ್ಕಾರಗಳನ್ನು ಕ್ಷಣ ಮಾತ್ರದಲ್ಲಿ ಉರುಳಿಸುವ ಶಕ್ತಿ ಇರುವುದು ಕೇವಲ ಕಾರ್ಮಿಕರಿಗೆ ಮಾತ್ರ ಎಂದರು.
ಭೂಮಾಲೀಕರು ಹಾಗೂ ಶ್ರೀಮಂತ ವರ್ಗದವರು ತಮ್ಮ ರಾಜಕೀಯ ಸ್ವಾರ್ಥದಿಂದ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಅಧಿಕಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಅಗತ್ಯ ವಸ್ತುಗಳ ಬೆಲೆಯನ್ನು ಪದೇ ಪದೇ ಏರಿಕೆ ಮಾಡುವ ಮೂಲಕ ಕೂಲಿ ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿವೆ.100 ರೂನಲ್ಲಿ ಕೇವಲ 1 ಭಾಗದಷ್ಟು ಮಾತ್ರ ಕಛೂಲಿಕಾರ್ಮಿಕರಿಗೆ ನೀಡಿ, ಉಳಿದ ಭಾಗವನ್ನು ದೋಚಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ವಿಮೆ ಪತ್ರಗಳನ್ನು ವಿತರಿಸಲಾಯಿತು.
ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ, ಜಿ.ಪಂ. ಸದಸ್ಯೆ ಸಾವಿತ್ರಮ್ಮ ಮಾತನಾಡಿದರು.
ಜಿ.ಪಂ. ಸದಸ್ಯೆ ನಾರಾಯಣಮ್ಮ, ತಾ.ಪಂ.ಅಧ್ಯಕ್ಷೆ ಮುನಿರತ್ನಮ್ಮ, ಸಿಪಿಎಂ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ಡಿವೈಎಫ್ ಐ ತಾಲ್ಲೂಕು ಸಂಚಾಲಕ ಹೇಮಚಂದ್ರ, ಮಂಜುನಾಥರೆಡ್ಡಿ, ಆಂಜನೇಯರೆಡ್ಡಿ, ಜಿ. ಮುಸ್ತಾಫ ಸೇರಿದಂತೆ ತಾಲೂಕು ಅಕ್ಷರದಾಸೋಹ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.