ಸಂಘಟಿತ ಹೋರಾಟಕ್ಕೆ ಮುಂದಾಗಿ
ಕೋಲಾರ: ಆಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ಬಂಡವಾಳ ಶಾಹಿಗಳಿಗೆ ಲಾಭ ಮಾಡಿಕೊಡುತ್ತಿದ್ದು ಅನ್ಯಾಯದ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಎಸ್. ವರಲಕ್ಷ್ಮೀ ಕರೆ ನೀಡಿದರು.
ಸಿಐಟಿಯು ವತಿಯಿಂದ ಕೋಲಾರ ನಗರದ ಕೋರ್ಟ್ ಸರ್ಕಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬಂಡವಾಳಗಾರರು ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚಿನ ಲಾಭ ಗಳಿಸುವ ನೀತಿಗಳನ್ನು ಆಳುವ ಸರ್ಕಾರಗಳು ಜಾರಿಗೊಳಿಸುತ್ತಿದೆ. ಇದರಿಂದ ಬಂದಿರುವ ಲಾಭದಲ್ಲಿ ಶೇ.90ರಷ್ಟು ಮಾಲೀಕರಿಗೆ, ಉಳಿದ ಶೇ.10 ರಷ್ಟು ಮಾತ್ರ ಕಾರ್ಮಿಕರಿಗೆ ಸೇರುತ್ತಿರುವುದರಿಂದ ದೇಶದಲ್ಲಿ ಬಡವರು ಮತ್ತಷ್ಟು ಬಡವರಾಗಿ, ಶ್ರೀಮಂತರು ಅತಿ ದೊಡ್ಡ ಶ್ರೀಮಂತರಾಗುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಬದಲು ಹಕ್ಕುಗಳನ್ನು ಕಸಿದುಕೊಳ್ಳಲು ನೀತಿಗಳನ್ನು ಜಾರಿಗೆ ತರುತ್ತಿದೆ. ಇದರಿಂದಾಗಿ ಬಹುತೇಕ ಕಡೆ ಗುತ್ತಿಗೆ ಆಧಾರಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗದೆ ಪರಿತಪಿಸುತ್ತಿದ್ದಾರೆಂದು ಹೇಳಿದರು. ರಾಜ್ಯದ ಬಿಸಿಯೂಟ ನೌಕರರರಿಗೆ ತಿಂಗಳಿಗೆ ಕೇವಲ ಒಂದು ಸಾವಿರ ರು. ಮತ್ತು ಆಶಾ ಕಾರ್ಯಕರ್ತೆಯರಿಗೆ ಯಾವುದೇ ನಿಗದಿತ ವೇತನ ಇಲ್ಲದೇ ರಾಜ್ಯ ಸರ್ಕಾರ ದುಡಿಸಿಕೊಳ್ಳುತ್ತಿದೆ. ಸಮಾಜದಲ್ಲಿ ಎಲ್ಲಾ ತರಹದ ಸಾಮಾಜಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ದುಡಿಯುವ ಜನರೇ ಆಗಿದ್ದಾರೆ, ಆದರೆ ಅಸಂಘಟಿತ ಕಾರ್ಮಿಕ ಕ್ಷೇತ್ರದಲ್ಲಿ ಕೂಲಿ ನೀಡುವಾಗ ಲಿಂಗಾಧಾರಿತ ಭೇದವನ್ನು ಈಗಲೂ ಅನುಸರಿಸಲಾಗುತ್ತಿದೆ ಎಂದು ವಿಷಾದಿಸಿದರು.
ಪ್ರತಿ ಕಾರ್ಮಿಕನಿಗೆ ಕನಿಷ್ಠ 10 ಸಾವಿರ ಕನಿಷ್ಠ ವೇತನ ನೀಡಬೇಕು, ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕೆಂದು ಒತ್ತಾಯಿಸಿದ ಅವರು, ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ಶೋಷಣೆ ತಡೆಯಲಾಗುವುದಿಲ್ಲವೆಂದರು.
ಮುಖ್ಯ ಅತಿಥಿಯಾಗಿ ಡಿವೈಎಸ್‌ಪಿ ಕೆ.ಅಶೋಕಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಅಮರನಾರಾಯಣ, ಸಿ.ಆರ್. ಅಶೋಕ್, ಮುನಿರಾಜಮ್ಮ, ಎಚ್.ಬಿ. ಕೃಷ್ಣಪ್ಪ, ಎನ್.ಎನ್. ಶ್ರೀರಾಮ್, ವಾಸುದೇವರೆಡ್ಡಿ, ನಿರ್ಮಲ, ಹೊಗರಿ ನಾಗರಾಜಪ್ಪ ಇದ್ದರು.