ದಾಹ ತಣಿಸಲು ಬರುವ ಜಿಂಕೆಗಳು ನಾಯಿಪಾಲು
ಬಂಗಾರಪೇಟೆ: ಬಿಸಿಲಿನ ತಾಪಮಾನ ತಾಳಲಾರದೆ ಕಾಡಿನಿಂದ ನಾಡಿನತ್ತ ನೀರು ಹುಡುಕಿಕೊಂಡು ಬರುವ ಜಿಂಕೆಗಳು ನಾಯಿಗಳಿಗೆ ಆಹಾರವಾಗುತ್ತಿವೆ.
ಇಲ್ಲಿನ ಪ್ರದೇಶವನ್ನು ಕಾಡುತ್ತಿರುವ ತೀವ್ರ ಕ್ಷಾಮ ಇದೀಗ ಕಾಡಿಗೂ ತಟ್ಟಿದ್ದು, ಕಾಡಿನಲ್ಲಿ ಪ್ರಾಣಿಗಳಿಗೆ ಯಾವುದೇ ಮೇವು ಮತ್ತು ನೀರು ಸಿಗದ ಕಾರಣ ನಾಡಿಗೆ ವಲಸೆ ಬರುತ್ತಿದೆ. ಇಲ್ಲಿಗೆ ಸಮೀಪದ ಕೃಷ್ಣಾವರಂ ಸಮೀಪ ಕಾಡಿನಲ್ಲಿ ಜಿಂಕೆಗಳು ವಾಸಿಸುತ್ತಿದ್ದು, ಕಾಡಿನಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಸುತ್ತ-ಮುತ್ತಲಿನ ಗ್ರಾಮಗಳ ತೋಟಗಳಿಗೆ ವಲಸೆ ಬರುತ್ತಿವೆ.
ಮೇವಿಗಾಗಿ ಬರುವ ಜಿಂಕೆಗಳನ್ನು ನಾಯಿಗಳು ಕಚ್ಚಿ ಸಾಯಿಸುವುದು ಇಲ್ಲಿ ಸಾಮಾನ್ಯವಾಗಿದೆ. ವಾರದ ಹಿಂದೆ ಸಹ ನೀರಿಗಾಗಿ ಪಟ್ಟಣಕ್ಕೆ ಬಂದಿದ್ದ ಜಿಂಕೆಯನ್ನು ನಾಯಿಯೊಂದು ಕಚ್ಚಿ ಸಾಯಿಸಿತ್ತು. ಅರಣ್ಯದೊಳಗೆ ಪ್ರಾಣಿಗಳಿಗೆ ಮೇವು- ನೀರಿನ ವ್ಯವಸ್ಥೆಯನ್ನು ಇಲಾಖೆ ಕೈಗೊಳ್ಳದಿದ್ದರೆ ಮುಂದೆ ಜಿಂಕೆಗಳ ಸಂತತಿ ಕ್ಷೀಣಿಸಲಿದೆ ಎಂಬುದು ಕೃಷ್ಣಾವರಂ ಗ್ರಾಮಸ್ಥರ ಅಳಲು.
ಅರಣ್ಯ ಇಲಾಖೆ ಪ್ರಾಣಿಗಳಿಗೆ ಕಾಡಿನಲ್ಲೇ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಇದರಿಂದ ಅವು ನಾಡಿಗೆ ಬರುವುದು ತಪ್ಪುತ್ತದೆ. ಮಾತ್ರವಲ್ಲ, ಕೃಷ್ಣಾವರಂ ಸಮೀಪ ಆಗಾಗ ನೀರಿಗಾಗಿ ಬರುವ ಜಿಂಕೆಗಳನ್ನು ದುಷ್ಕರ್ಮಿಗಳು ಬೇಟೆಯಾಡುವರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂಬುದು ಗ್ರಾಮಸ್ಥರ ದೂರು. ಜಿಂಕೆಗಳು ಕಾಡಿನಿಂದ ಗ್ರಾಮಗಳತ್ತ ಬರದಂತೆ ಅರಣ್ಯ ಇಲಾಖೆ ಕಾಡಿನ ಸುತ್ತಲೂ ಬೇಲಿ ಹಾಕಿ ಅವುಗಳಿಗೆ ಅಲ್ಲಿಯೇ ನೀರು ಸಿಗುವಂತೆ ಮಾಡಿ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.