ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ದಾಹ ತೀರಿಸಲು ವಿದ್ಯುತ್ ಅಡ್ಡಿ

Mainashree
Updated On : 2 May 2014, 11:39 am

ಚಿಕ್ಕಬಳ್ಳಾಪುರ: ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಲು ಅಸಮರ್ಪಕ ವಿದ್ಯುತ್ ಸರಬರಾಜು ಅಡ್ಡಿಯಾಗಿರುವುದರಿಂದ ನೀರಿನ ಪೂರೈಕೆಗೆ ಅಧಿಕಾರಿಗಳು ಪರದಾಡುವಂತಾಗಿದೆ.
ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರ ಕಾಡುತ್ತಿರುವ ಗ್ರಾಮಗಳನ್ನು ಗುರುತಿಸಿ ಕೊಳವೆ ಬಾವಿಗಳ ಮೂಲಕ ಇಲ್ಲವೇ ಖಾಸಗೀ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ವಿದ್ಯುತ್ ಸಮಸ್ಯೆ ಇದಕ್ಕೆ ಅಡ್ಡಿಯಾಗಿದೆ. ಈಗಾಗಲೇ ಗ್ರಾಪಂ ಕಾರ್ಯದರ್ಶಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿದ್ಯುತ್ ಅಡಚಣೆ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.
ಅಂತರ್ಜಲ ಮಟ್ಟ ಪಾತಾಳ ತಲುಪಿರುವ ಜಿಲ್ಲೆಯಲ್ಲಿ 500 ಅಡಿಗೂ ಹೆಚ್ಚಿನ ಆಳ ಕೊರೆಸಿದಾಗ ಅಲ್ಪ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದೆ. ಇಂತಹ ಕೊಳವೆ ಬಾವಿಗಳಿಂದ ನೀರೆತ್ತಲು 250 ಎಚ್‌ಪಿಗಿಂತ ಕಡಿಮೆ ವಿದ್ಯುತ್‌ನಲ್ಲಿ ಸಾಧ್ಯವಾಗುವುದಿಲ್ಲ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಕೇವಲ 2 ಗಂಟೆಯೂ ಸರಿಯಾಗಿ ತ್ರಿ ಫೇಸ್ ವಿದ್ಯುತ್ ಸರಬರಾಜಾಗುತ್ತಿಲ್ಲ. ಸಿಂಗಲ್ ಫೇಸ್‌ನಲ್ಲೂ ಅನಧಿಕೃತ ಲೋಡ್ ಶೆಡ್ಡಿಂಗ್ ಕೈಗೊಳ್ಳುತ್ತಿದ್ದು ನಗರ, ಪಟ್ಟಣ ಪ್ರದೇಶಗಳಲ್ಲಿ ಕನಿಷ್ಠ ಏಳೆಂಟು ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ. ಇದರಿಂದ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರುಗಳು ಸುಟ್ಟು ಸಮಸ್ಯೆ ಉದ್ಭವಿಸುತ್ತಿದೆ.
ನಡುರಾತ್ರಿಯಲ್ಲಿ ನೀರು ಪೂರೈಕೆ ಮಾಡುತ್ತಿದ್ದು ಜನರು ನೀರಿಗಾಗಿ ಜಾಗರಣೆ ಮಾಡಬೇಕು. ವೋಲ್ಟೇಜ್ ಏರುಪೇರಿನಿಂದ ನಲ್ಲಿಗಳಲ್ಲೂ ನೀರು ಸರಿಯಾಗಿ ಬಾರದೇ ಬೆಸ್ಕಾಂ ಅಧಿಕಾರಿಗಳ ಬದಲಿಗೆ ವಾಟರ್‌ಮನ್‌ಗಳು ಮತ್ತು ನಗರಸಭಾ ಸದಸ್ಯರು ಜನರ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಾರೆ. ನಗರದಲ್ಲಿ ಪ್ರತಿದಿನ 25 ಟ್ಯಾಂಕರ್ ಅಗತ್ಯವಿದ್ದು, ಕೇವಲ 13 ಟ್ಯಾಂಕರ್‌ಗಳಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಮತ್ತೊಂದೆಡೆ ಖಾಸಗೀ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುವವರು ಕರೆಂಟಿನ ಸಮಸ್ಯೆ ಹೇಳಿಕೊಂಡು ನೀರಿನ ಬೇಡಿಕೆ ಹೆಚ್ಚಿಸಿ ದುಬಾರಿ ಹಣ ಕೀಳಲಾಗುತ್ತಿದೆ.

ಎನ್. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement