ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬಸವಣ್ಣನವರ ತತ್ವಾದರ್ಶಗಳ ಪಾಲನೆಯಿಂದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ'

Mainashree
Updated On : 2 May 2014, 11:41 am

ಕೋಲಾರ: ವಿಶ್ವ ಗುರು ಬಸವಣ್ಣ ನವರ ತತ್ವ ವಚನಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಈ ದೇಶದಲ್ಲಿ ಸಮಾನತೆ, ಮಾನವೀಯತೆ ಮತ್ತು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಅಭಿಪ್ರಾಯಪಟ್ಟರು.
ನಗರದ ಸೇವಾದಳ ಕಚೇರಿಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿ ಅವರು ಮಾತನಾಡುತ್ತಿದ್ದರು.  
ಮಹಾ ಮಾನವತಾವಾದಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿಯತೆ ವಿರುದ್ದ ಸಮಾನತೆಗಾಗಿ  ವಚನಗಳನ್ನು ರಚಿಸಿ  ಹೊಸ ಕ್ರಾಂತಿಯನ್ನೇ ಸೃಷ್ಟಿಸಿದವರು. ಅವರ ಮಾರ್ಗದರ್ಶನದಲ್ಲಿಯೇ  ಮಹಾತ್ಮಗಾಂಧಿ, ನೆಹರು, ಲಾಲ್ ಬಹುದೂರ್‌ಶಾಸ್ತ್ರಿ, ಅಂಬೇಡ್ಕರ್ ಮುಂತಾದವರು ಮುನ್ನಡೆದು ಈ ದೇಶದ  ಆದರ್ಶ ಪುರುಷರೇನಿಸಿಕೊಂಡರು ಎಂದರು.
12ನೇ ಶತಮಾನದಲ್ಲೇ ಅಸ್ಪೃಶ್ಯತೆ,ಅಸಮಾನತೆ ವಿರುದ್ಧ ಧ್ವನಿಯೆತ್ತಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ ಬಸವಣ್ಣನವರು ಭಾರತೀಯ ಸಂಸ್ಕೃತಿಯ ಮಹಾನ್ ಸಾಧಕರು ಎಂದು ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್, ವಚನ ಸಾಹಿತ್ಯದ ಮೂಲಕ ಬಸವಣ್ಣನವರು ಸಮಾಜಕ್ಕೆ ದಾರಿ ತೋರಿದ್ದಾರೆ, ಅವರ ಹಾದಿಯಲ್ಲಿ ನಾವು ಸಾಗಿದ್ದೇ ಆದಲ್ಲಿ ನೆಮ್ಮದಿಯ ಬದುಕು ಸಾಗಿಸಬಹುದಾಗಿದೆ ಎಂದು ತಿಳಿಸಿದರು.
ಇಂದು ದೇಶವನ್ನು ಕಾಡುತ್ತಿರುವ ಜಾತಿಯತೆ, ಧರ್ಮಾಂದತೆಯನ್ನು ಹೋಗಲಾಡಿಸಿ ನವ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಸೇವಾದಳ ಕಾರ್ಯದರ್ಶಿ ವಿ.ಪಿ. ಸೋಮಶೇಖರ್, ಬಸವಣ್ಣನವರ ತತ್ವಗಳ ಅಳವಡಿಕೆಯಿಂದ ಸಮಾಜದಲ್ಲಿನ ಭಯೋತ್ಪಾದನೆ, ಅಸಮಾನತೆಯನ್ನು ಹೋಗಲಾಡಿಸಬಹುದಾಗಿದೆ ಎಂದರು.
ಸೇವಾದಳದ ಕೋಶಾಧ್ಯಕ್ಷ ಎಸ್. ಸುಧಾಕರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿ. ಮಂಜುನಾಥ್, ಜಿಲ್ಲಾ ಬೋಧಕ ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement