ಸೇವೆಗೆ ಅಂತ್ಯವಿಲ್ಲ, ಅದು ನಿರಂತರ
ಹಾಸನ: ಸೇವೆಗೆ ಎಂದು ಅಂತ್ಯವಿಲ್ಲ ಅದು ನಿರಂತರವಾಗಿರುತ್ತದೆ ಎಂದು ಎನ್.ಡಿ.ಆರ್.ಕೆ. ಕಾಲೇಜ್ ಆಂಗ್ಲ ಮಾಧ್ಯಮ ವಿಭಾಗದ ನೀಲಕಂಠ ಎನ್. ಮನ್ವಚಾರ್ ತಿಳಿಸಿದ್ದಾರೆ.
ನಗರದ ಎನ್.ಡಿ.ಆರ್.ಕೆ. ಕಾಲೇಜ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ 2013-14ನೇ ಸಾಲಿನ ಅಂತ್ಯದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮೊದಲು ಕಾಲೇಜ್ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಘಟಿತರಾಗಿ ಒಟ್ಟಿಗೆ ಕೆಲಸ ಮಾಡುವುದು ಉತ್ತಮ ಬೆಳವಣೆಗೆ. ನಿರ್ವಹಿಸುವ ಕೆಲಸದಲ್ಲಿ ಶ್ರದ್ಧೆ ತಿಳಿಸಿಕೊಡುವುದು ಎನ್.ಎಸ್.ಎಸ್. ಘಟಕ ಎಂದು ಕಿವಿಮಾತು ಹೇಳಿದರು.
ಪರಿಸರ ಮಾಲಿನ್ಯದ ಬಗೆಗಿನ ಅರಿವಿನ ಅಗತ್ಯ ಎಲ್ಲೆಲ್ಲಿ ಇದೆಯೋ ಅಲ್ಲಲ್ಲಿ, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇವೆಯನ್ನು ತಾನು ಮಾಡಿದಲ್ಲದೆ ಮತ್ತೊಬ್ಬರಿಗೆ ನಿರ್ವಹಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಒಂದು ವರ್ಷದ ಎನ್.ಎಸ್.ಎಸ್. ಸೇವೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಇಂತಹ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ಸರ್ಕಾರದ ವರ್ಷದ ಬಜೆಟ್‌ನಂತೆ ಎನ್.ಎಸ್.ಎಸ್ ಆಯ-ವ್ಯಯ ಬಗ್ಗೆ ಕೂಡ ಕಾಣುತ್ತೇವೆ. ಇದೊಂದು ಆತ್ಮವಲೋಕನ ಮಾಡಿಕೊಳ್ಳುವ ಮುಖ್ಯವಾದ ದಿವಸ ಎಂದು ಹೇಳಿದರು.
ಇದೇ ವೇಳೆ ಬಸ್ತಿಹಳ್ಳಿಯಲ್ಲಿ ವಾರ್ಷಿಕ ಎನ್.ಎಸ್.ಎಸ್ ಶಿಬಿರದಲ್ಲಿ ಭಾಗವಹಿಸಿದ ವೇಳೆ ಸಹಕರಿಸಿದ ದೇವೇಗೌಡ, ಸುರೇಶ್, ಮಂಜುನಾಥ್, ಯೋಗೀಶ್ ಹಾಗೂ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನೀಲಕಂಠ ಎನ್. ಮನ್ವಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ. ಶಾಮ್ ಭಟ್, ರಾಷ್ಟ್ರೀಯ ಸೇವಾ ಯೋಜನೆ ಘಟಕ 2ರ ಅಧಿಕಾರಿ ನಿಂಗಪ್ಪ, ಕನ್ನಡ ವಿಭಾಗದ ಶಾಂತೇಗೌಡ ಇತರರು ಭಾಗವಹಿಸಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕ 1ರ ಅಧಿಕಾರಿ ಜಯರಾಮ್ ಸ್ವಾಗತಿಸಿದರು.