ಆತ್ಮಹತ್ಯೆ ಮಾಡಿಕೊಂಡ ಮೂರು ರೈತ ಕುಟುಂಬಗಳಿಗೆ ಪರಿಹಾರ ವಿತರಣೆ
ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮೂರು ರೈತ ಕುಟುಂಬಗಳಿಗೆ ತಲಾ ರು. 25 ಸಾವಿರ ಪರಿಹಾರ ಧನವನ್ನು ಶನಿವಾರ ಪ್ರಾಂತ ರೈತ ಸಂಘದಿಂದ ನೀಡಲಾಯಿತು.
ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋಲಾರ ತಾಲೂಕಿನ ಕಿತ್ತಂಡೂರು ರೈತ ವೆಂಕಟಪ್ಪನ ಪತ್ನಿ ಅಮರಾವತಮ್ಮ, ಯಡಹಳ್ಳಿ ರೈತ ಶ್ರೀನಿವಾಸ್ ಪತ್ನಿ ಶೋಭಮ್ಮ, ಶ್ರೀನಿವಾಸಪುರ ತಾಲೂಕಿನ ಚಿಲ್ಲೊರಿಪಲ್ಲಿ ಗ್ರಾಮದ ರೈತ ಸಿದ್ದಾರೆಡ್ಡಿ ಪತ್ನಿ ಶಾಂತಮ್ಮ ಅವರಿಗೆ ತಲಾ ರು.25 ಸಾವಿರ ನಗದು
ನೀಡಲಾಯಿತು. ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಸಾಲ ತೀರಿಸಲಾಗದೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡು ಒಂದು ತಿಂಗಳು ಕಳೆದರೂ ಜಿಲ್ಲಾಡಳಿತವಾಗಲಿ, ಉಸ್ತುವಾರಿ ಸಚಿವರಾಗಲಿ ಇಲ್ಲವೇ ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ಮತ್ತು ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸದೆ ಇರುವುದನ್ನು ಖಂಡಿಸಿದರಲ್ಲದೇ ರೈತರ ಕುರಿತು ಸರ್ಕಾರಕ್ಕೆ ಇರುವ ಕಾಳಜಿ ಇದರಿಂದ ಅರ್ಥವಾಗುತ್ತದೆ ಎಂದು ಟೀಕಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಪಿ.ಆರ್.ನವೀನ್ಕುಮಾರ್, ಗಂಗಮ್ಮ, ಉಪಾಧ್ಯಕ್ಷ ಟಿ.ಕೃಷ್ಣೇಗೌಡ, ಮುಖಂಡರಾದ ಪಿ.ಶ್ರೀನಿವಾಸ್, ಕುರ್ಕಿ ದೇವರಾಜ್, ಎಸ್.ರಮೇಶ್, ವಿ.ವೆಂಕಟೇಶಪ್ಪ,ಶ್ರೀರಾಮ್, ಪದ್ಮಮ್ಮ, ಗಂಗಟ್ಟ ಯಲ್ಲಪ್ಪ ಇದ್ದರು.